ಬಿಹಾರದಲ್ಲಿ ಚುನಾವಣಾ ರಾಜಕೀಯ ಬಿಸಿ ಏರಿದ್ದು, ಬಿಜೆಪಿ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ಗೋಪಾಲಗಂಜ್ನಲ್ಲಿ ನಡೆದ ಬೃಹತ್ ಸಭೆಯಲ್ಲಿ ಮಾತನಾಡಿದ ಶಾ, ಲಾಲು ಅವರನ್ನು ಭ್ರಷ್ಟಾಚಾರದ ಪರ್ಯಾಯವೆಂದು ಕರೆದಿದ್ದಾರೆ.
ಮೇವು ತಿಂದವರು ಬಿಹಾರದ ಅಭಿವೃದ್ಧಿ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಲಾಲು ಪ್ರಸಾದ್ ವಿರುದ್ಧ ಗಂಭೀರ ಆರೋಪ ಮಾಡಿರುವ ಅಮಿತ್ ಶಾ, ಲಾಲು ನೇತೃತ್ವದ ಆರ್ಜೆಡಿ ಸರ್ಕಾರದ ಅವ್ಯವಹಾರದಿಂದ ಬಿಹಾರ ಹಿಂದುಳಿದಿದೆ. ಅವರು ಬಿಟುಮೆನ್ ಹಗರಣ, ಪ್ರವಾಹ ಪರಿಹಾರ ಹಗರಣ, ‘ಚಾರ್ವಾಹ ವಿದ್ಯಾಲಯ’ ಹಗರಣ ಮತ್ತು ಪ್ರಖ್ಯಾತ ಮೇವು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಮೇವು ಹಗರಣ: ಬಿಹಾರದ ರಾಜಕೀಯ ಕಳಂಕ
1990ರ ದಶಕದಲ್ಲಿ ಬಿಹಾರ ಮತ್ತು ಜಾರ್ಖಂಡ್ ಒಟ್ಟಾಗಿದ್ದ ಕಾಲದಲ್ಲಿ ಬಹಿರಂಗಗೊಂಡ ಮೇವು ಹಗರಣದಲ್ಲಿ, ದೋರಾಂಡಾ, ದಿಯೋಘರ್, ದುಮ್ಕಾ ಮತ್ತು ಚೈಬಾಸಾದ ಖಜಾನೆಗಳಿಂದ ಕೋಟ್ಯಂತರ ರೂ. ವಂಚನೆ ನಡೆದಿತ್ತು. ಲಾಲು ಪ್ರಸಾದ್ ಈ ಹಗರಣದಲ್ಲಿ ತಪ್ಪಿತಸ್ಥರಾಗಿದ್ದು, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ.
ಲಾಲು-ರಾಬ್ರಿ ಆಡಳಿತ ಮತ್ತು ಕೇಂದ್ರದಲ್ಲಿ ಸೋನಿಯಾ-ಮನಮೋಹನ್ ಸರ್ಕಾರ ಬಿಹಾರಕ್ಕೆ ಏನನ್ನೂ ಮಾಡಲಿಲ್ಲ. ಲಾಲು ಪ್ರಸಾದ್ ಕುಟುಂಬ ರಾಜಕಾರಣಕ್ಕೆ ಆದ್ಯತೆ ನೀಡಿ ತಮ್ಮ ಇಬ್ಬರು ಪುತ್ರರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಲು ಪ್ರಯತ್ನಿಸಿದರು, ಪತ್ನಿಯನ್ನು ಸಿಎಂ ಮಾಡಿದರು, ಮಗಳನ್ನು ರಾಜ್ಯಸಭೆಗೆ ಕಳುಹಿಸಿದರು. ಆದರೆ ಬಿಹಾರದ ಜನರಿಗಾಗಿ ಏನೂ ಮಾಡಲಿಲ್ಲ ಎಂದು ಶಾ ವಾಗ್ದಾಳಿ ನಡೆಸಿದರು.
ಬಿಹಾರ ಪ್ರವಾಹ ಮುಕ್ತಗೊಳ್ಳಲಿದೆ: ಶಾ ಭರವಸೆ
ಎನ್ಡಿಎ ಸರ್ಕಾರದ ಯಶಸ್ಸನ್ನು ಪ್ರಸ್ತಾಪಿಸಿದ ಅಮಿತ್ ಶಾ, ಮುಂದಿನ ಐದು ವರ್ಷಗಳಲ್ಲಿ ಬಿಹಾರವನ್ನು ಪ್ರವಾಹ ಮುಕ್ತಗೊಳಿಸಲಾಗುವುದು. ಪ್ರವಾಹ ಬಿಹಾರದ ಇತಿಹಾಸದಲ್ಲೇ ಭೂತಕಾಲವಾಗಲಿದೆ ಎಂದು ಭರವಸೆ ನೀಡಿದರು.
ಅಲ್ಲದೆ, ಸೀತಾದೇವಿಯ ಜನ್ಮಸ್ಥಳದಲ್ಲಿ ಎನ್ಡಿಎ ಸರ್ಕಾರ ಭವ್ಯ ದೇವಸ್ಥಾನವನ್ನು ನಿರ್ಮಿಸುತ್ತಿದೆ ಎಂಬ ಮಹತ್ವದ ಘೋಷಣೆಯನ್ನೂ ಅವರು ಮಾಡಿದರು.
ಬಿಹಾರ ಚುನಾವಣಾ ವೇಳೆಯಲ್ಲಿ ಅಮಿತ್ ಶಾ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಮತ್ತು ಆರ್ಜೆಡಿ ನಡುವೆ ಮುಂದಿನ ದಿನಗಳಲ್ಲಿ ರಾಜಕೀಯ ಕಸರತ್ತು ಇನ್ನಷ್ಟು ಗರಿಗೆದರುತ್ತದೆ ಎನ್ನುವುದು ಸ್ಪಷ್ಟವಾಗಿದೆ!