Amith Sha : ಮೋದಿ ನೇತೃತ್ವದ ಸರ್ಕಾರಾವಧಿಯಲ್ಲಿ ಭಾರತದ ಒಂದಿಂಚು ಭೂಮಿಯನ್ನೂ ಕಬಳಿಸಲು ಸಾಧ್ಯವಿಲ್ಲ – ಅಮಿತ್ ಶಾ
ಗಡಿಯಲ್ಲಿ ಭಾರತ ಚೀನಾ ಯೋಧರ ನಡುವೆ ಘರ್ಷಣೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯೆ ನೀಡಿದ್ದು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇರುವವರೆಗೂ ಯಾರೊಬ್ಬರೂ ಭಾರತದ ಒಂದಿಂಚು ಭೂಮಿಯನ್ನೂ ಕಬಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಮತ್ತು ಭಾರತ ಸೇನಾ ಸಂಘರ್ಷದ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿದ ನಂತರ ಪ್ರತಿಕ್ರಿಯಿಸಿದ ಅಮಿತ್ ಶಾ ಅವರು ಈ ಹೇಳಿಕೆ ನೀಡಿದ್ದಾರೆ..
ಸಂಸತ್ತಿನ ಹೊರಗಡೆ ಸುದ್ದಿಗಾರರ ಜೊತೆ ಮಾತನಾಡಿದ ಅವರು , ರಾಜೀವ್ ಗಾಂಧಿ ಫೌಂಡೇಶನ್ ರದ್ದು ಕುರಿತಾದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್, ಗಡಿ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದೆ ಎಂದು ಆರೋಪಿಸಿದ್ದಾರೆ.
ಅಲ್ಲದೇ ರಾಜೀವ್ ಗಾಂಧಿ ಫೌಂಡೇಶನ್ ಗೆ ಚೀನಾ ರಾಯಭಾರ ಕಚೇರಿಯಿಂದ ₹ 1.35 ಕೋಟಿ ಬಂದಿದೆ ಎಂದೂ ಕೂಡ ಆರೋಪಿಸಿದ್ದಾರೆ.
ನೆಹರೂ ಅವರ ಚೀನಾದ ಮೇಲಿನ ಪ್ರೀತಿಯಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸ್ಥಾನವನ್ನು ತ್ಯಾಗ ಮಾಡಲಾಗಿತ್ತು ಎಂದು ಅಮಿತ್ ಶಾ ಹೇಳಿದರು.








