ಕೋವಿಡ್ ನಿಂದ ಗುಣಮುಖರಾದವರ ಪೈಕಿ ಹಲವರಲ್ಲಿ ಕ್ಷಯ ರೋಗ ಪತ್ತೆ – ಸಚಿವ ಸುಧಾಕರ್
ಕೋವಿಡ್ ನಿಂದ ಗುಣಮುಖರಾದವರ ಪೈಕಿ ಹಲವರಲ್ಲಿ ಕ್ಷಯ ರೋಗ ಪತ್ತೆಯಾಗಿದ್ದು, ಈ ಕುರಿತು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿದ್ದ, ‘ವಿಶ್ವ ಕ್ಷಯರೋಗ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಕೋವಿಡ್ ನಿಂದ ಗುಣಮುಖರಾದವರಿಗೆ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದಲೇ ಕ್ಷಯ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆಗೊಳಪಟ್ಟ 25 ಲಕ್ಷ ಜನರಲ್ಲಿ 144 ಜನರಿಗೆ ಕ್ಷಯ ದೃಢಪಟ್ಟಿದೆ. ಕೋವಿಡ್ ಬಂದ ಬಳಿಕವೇ ಇವರಿಗೆ ಕ್ಷಯ ಬಂದಿದೆ. ಹೀಗಾಗಿ ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಲು ಸೂಚಿಸಲಾಗಿದೆ.
ಕೋವಿಡ್ ನಂತೆಯೇ ಕ್ಷಯವೂ ಸಾಂಕ್ರಾಮಿಕ ರೋಗ. ಕೋವಿಡ್ ವೈರಸ್ ನಿಂದ ಬಂದರೆ, ಕ್ಷಯವು ಬ್ಯಾಕ್ಟೀರಿಯಾದಿಂದ ಬರುತ್ತದೆ. 2030 ರ ವೇಳೆಗೆ ಜಗತ್ತನ್ನು ಕ್ಷಯರೋಗದಿಂದ ಮುಕ್ತ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2025 ರೊಳಗೆ ಭಾರತವನ್ನು ಕ್ಷಯ ಮುಕ್ತ ಮಾಡಬೇಕು ಎಂಬ ಗುರಿ ಪ್ರಕಟಿಸಿದೆ. ಇದು ಕೇವಲ ವೈದ್ಯರು ಅಥವಾ ಸರ್ಕಾರದಿಂದ ಸಾಧ್ಯವಿಲ್ಲ. ಇದಕ್ಕೆ ಸಾಮೂಹಿಕ ಪ್ರಯತ್ನ ಅಗತ್ಯ ಎಂದು ತಿಳಿಸಿದರು.