ಕೋಲ್ಕತ್ತಾ : ಕೊರೊನಾ ಕಾಟದ ನಡುವೆ ಪಶ್ಚಿಮ ಬಂಗಾಳಕ್ಕೆ ಅಂಫಾನ್ ಚಂಡಮಾರುತ ಅಪ್ಪಳಿಸಿದ್ದು, ನಾನಾ ಅವಾಂತರಗಳನ್ನು ಸೃಷ್ಟಿಸಿದೆ. ಅಂಫಾನ್ ನಿಂದಾಗಿ ಕೋಲ್ಕತ್ತಾ ವಿಮಾನ ನಿಲ್ದಾಣ ನೀರಿನಿಂದ ಮುಳುಗಡೆಯಾಗಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುಮಾರು 40 ಟನ್ ನೀರು ನಿಂತಿದ್ದು, ವಿಮಾನಗಳು ನದಿಯಲ್ಲಿ ನಿಂತಿರುವಂತೆ ಕಾಣುತ್ತಿವೆ. ರನ್ ವೇ ಹೊರತುಪಡಿಸಿ ನಿಲ್ದಾಣದ ಬಹುತೇಕ ಪ್ರದೇಶಗಳಲ್ಲಿ ನೀರು ನಿಂತಿದೆ. ಪಶ್ಚಿಮ ಬಂಗಾಳದಲ್ಲಿ ಗಂಟೆಗೆ ಸುಮಾರು 185 ಕಿ.ಮೀ ವೇಗದಲ್ಲಿ ಪ್ರಬಲವಾದ ಬಿರುಗಾಳಿ ಬೀಸುತ್ತಿದೆ. ಪರಿಣಾಮ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಮರಗಳು, ಕಟ್ಟಡಗಳು ನೆಲಕಚ್ಚಿವೆ. ಪಶ್ಚಿಮ ಬಂಗಾಳದಲ್ಲಿ 10ರಿಂದ 12 ಮಂದಿ ಜೀವ ಕಳೆದುಕೊಂಡಿದ್ದಾರೆ.
ಅಂಫಾನ್ ಅಟ್ಟಹಾಸಕ್ಕೆ ಪಶ್ಚಿಮ ಬಂಗಾಳದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು ನಾಶಗೊಂಡಿದ್ದು, ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ಕೋಲ್ಕತಾದಲ್ಲಿ ಅನೇಕ ಕಟ್ಟಡಗಳು ನೆಲಕಚ್ಚಿದ್ದು, ಭಾರಿ ಹಾನಿಯುಂಟಾಗಿದೆ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ 6.5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ನಿನ್ನೆ ಮಧ್ಯಾಹ್ನ 2.30ಕ್ಕೆ ಅಂಫಾನ್ ಚಂಡಮಾರುತ ಪಶ್ಚಿಮ ಬಂಗಾಳದ ದಿಘಾ ಹಾಗೂ ಬಾಂಗ್ಲಾದೇಶದ ಹಟಿಯಾ ದ್ವೀಪದ ನಡುವೆ ಬಂದು ಅಪ್ಪಳಿಸಿತು. ಮೊದಲು 170 ಕಿಮೀ ವೇಗದಲ್ಲಿದ್ದ ಚಂಡಮಾರುತ ಬಳಿಕ 185 ಕಿಮೀ ವೇಗ ಪಡೆದುಕೊಂಡು ಆರ್ಭಟಿಸುತ್ತಾ ಸಾಗಿದೆ. ಚಂಡಮಾರುತದ ಹಿನ್ನೆಲೆ ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಪರಿಣಾಮ ಹಲವೆಡೆ ಜನವಸತಿ ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿದ್ದು, ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಇನ್ನು ಹೌರಾ ಜಿಲ್ಲೆ ಹಾಗೂ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ.
ಇನ್ನು ಪ್ರತಿ ಗಂಟೆಗೆ 185 ಕಿಲೋ ಮೀಟರ್ ವೇಗದಲ್ಲಿ ಅಂಫಾನ್ ಬೀಸುತ್ತಿದೆ. ಈ ರೀತಿಯ ಸೈಕ್ಲೋನ್ ಜೀವನದಲ್ಲಿತೇ ನೋಡಿರಲಿಲ್ಲ ಎಂದು ಪಶ್ಚಿಮ ಬಂಗಾಳದ ಜನರು ಹೇಳುತ್ತಾರೆ. ಕೆಲ ಹಿರಿಯರು 30 ವರ್ಷಗಳ ಹಿಂದೆ ಇದೇ ಚಂಡಮಾರುತ ಅಪ್ಪಳಿಸಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.
ಒಟ್ಟಾರೆ ಅಂಫಾನ್ ಚಂಡಮಾರುತಕ್ಕೆ ಸಿಲುಕಿರೋ ಪಶ್ಚಿಮ ಬಂಗಾಳದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಕೊರೊನಾ ಮಧ್ಯೆ ಅಂಫನಾ ಸೈಕ್ಲೋನ್ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.