ನವದೆಹಲಿ : ಕೊರೊನಾ ಕಾಟದ ನಡುವೆ ಅಂಫಾನ್ ಚಂಡಮಾರುತಕ್ಕೆ ಸಿಲುಕಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ 1 ಸಾವಿರ ಕೋಟಿ ರೂ. ಮುಂಗಡ ಮಧ್ಯಂತರ ನೆರವು ಘೋಷಿಸಿದ್ದಾರೆ.
ಇಂದು ಅಂಪಾನ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದರು. ಈ ವೇಳೆ ಪ್ರಧಾನಿಗಳಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಧನ್ಖರ್ ಸಾಥ್ ನೀಡಿದರು.
ಸಮೀಕ್ಷೆ ಬಳಿಕ ಮಾತನಾಡಿದ ನರೇಂದ್ರ ಮೋದಿ, ಚಂಡಮಾರುತದ ಹೊಡೆತಕ್ಕೆ ಸಿಲುಕಿರುವ ಪ್ರದೇಶಗಳ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ. ಪಶ್ಚಿಮ ಬಂಗಾಳ ಎದುರಾಗಿರುವ ಎಲ್ಲ ಸವಾಲುಗಳನ್ನು ಎದುರಿಸಿ ಮುಂದೆ ಬರಬೇಕಿದೆ. ಇಂತಹ ಸಮಯದಲ್ಲಿ ಪಶ್ಚಿಮ ಬಂಗಾಳದ ಜೊತೆ ಕೇಂದ್ರ ಸರ್ಕಾರ ಇರಲಿದೆ. ಪಶ್ಚಿಮ ಬಂಗಾಳ ಮತ್ತೆ ಮೊದಲಿನಿಂತಾಗಲೂ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದರು.
ಇನ್ನು ಕೊರೊನಾ ವೈರಸ್ ಜೊತೆಯಲ್ಲಿ ಚಂಡಮಾರುತದ ವಿರುದ್ಧ ಹೋರಾಟ ಮಾಡಬೇಕಾದ ಪರಿಸ್ಥಿತಿಯನ್ನು ಮಮತಾ ಬ್ಯಾನರ್ಜಿ ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದು ದೀದಿ ಕಾರ್ಯವನ್ನು ಮೋದಿ ಮೆಚ್ಚಿಕೊಂಡರು.
ಹಾಗೇ ಆಂಫಾನ್ ಚಂಡಮಾರುತದಿಂದ ಉಂಟಾದ ಹಾನಿ ಮತ್ತು ಪೀಡಿತ ಪ್ರದೇಶಗಳ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರವಾದ ಸಮೀಕ್ಷೆ ನಡೆಸಲು ಕೇಂದ್ರದ ತಂಡವು ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್ ಅವರು ಸ್ವಾಗತಿಸಿದರು. ಅಲ್ಲಿಂದ ಮೂವರು ವಾಯುಪಡೆಯ ಹೆಲಿಕಾಫ್ಟರ್ ಮೂಲಕ ವೈಮಾನಿಕ ಸಮೀಕ್ಷೆ ಆರಂಭಿಸಿದರು. ಈ ವೇಳೆ ಅಂಫಾನ್ ಚಂಡಮಾರುತದಿಂದ ಉತ್ತರ ಹಾಗೂ ದಕ್ಷಿಣ ಬಂಗಾಳದ ಜಿಲ್ಲೆಗಳು ಹೆಚ್ಚು ಹಾನಿಯಾಗಿದ್ದು, ರಾಜ್ಯದಲ್ಲಿ ಈವರೆಗೂ ಸುಮಾರು 80 ಜನರು ಬಲಿಯಾಗಿರುವ ಬಗ್ಗೆ ಮಮತಾ ಅವರು ಮೋದಿಗೆ ಮಾಹಿತಿ ನೀಡಿದರು.
ಸದ್ಯದ ಮಾಹಿತಿ ಪ್ರಕಾರ ಅಂಫಾನ್ ಚಂಡಮಾರುತದ ಅಬ್ಬರಕ್ಕೆ ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ 80 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ








