ಕೊರೋನಾದಿಂದ ರಕ್ಷಿಸಿಕೊಳ್ಳಲು ಅಮೃತ ಬಳ್ಳಿ ಎಂಬ ಇಮ್ಯುನಿಟಿ ಬೂಸ್ಟರ್
ಮಂಗಳೂರು, ಜುಲೈ 13: ‘ಅಮೃತ ಬಳ್ಳಿ’ – ಇದು ಸಾಮಾನ್ಯವಾಗಿ ಪ್ರತಿಯೊಬ್ಬರು ಕೇಳಿರಬಹುದಾದ, ಮನೆಮದ್ದಿನ ಅಥವಾ ಆಯುರ್ವೇದ ಪದ್ಧತಿಯಲ್ಲಿ ಉಪಯೋಗಿಸಲ್ಪಡುವ ಔಷಧೀಯ ಸಸ್ಯ. ಭಾರತವು ಅಸಂಖ್ಯಾತ ಔಷಧೀಯ ಸಸ್ಯಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ‘ಅಮೃತ ಬಳ್ಳಿ’ ಅಗ್ರಸ್ಥಾನದಲ್ಲಿದೆ. ಅಮೃತ ಬಳ್ಳಿ ಅದ್ಭುತ ಔಷಧೀಯ ಗುಣಗಳನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಾರಣ ಇದನ್ನು ಸರ್ವರೋಗ ನಿವಾರಿಣಿ ಎಂದೂ ಕರೆಯುತ್ತಾರೆ.
ಇದನ್ನು ಯುಗಯುಗದಿಂದಲೂ ಭಾರತೀಯ ಔಷಧದಲ್ಲಿ ಬಳಸುವ ‘ದೈವಿಕ’ ಸಸ್ಯವೆಂದು ಪರಿಗಣಿಸಲಾಗಿದೆ. ಈ ಗಿಡಮೂಲಿಕೆಯನ್ನು ಬಳಸಿಕೊಂಡು ಹಲವಾರು ಔಷಧಿಗಳನ್ನು ಭಾರತೀಯ ಆಯುರ್ವೇದ ಕಂಪನಿಗಳು ವಿವಿಧ ಬ್ರಾಂಡ್ಗಳ ಅಡಿಯಲ್ಲಿ ತಯಾರಿಸುತ್ತವೆ.
ಅಮೃತಬಳ್ಳಿಯು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ. ಅಮೃತಬಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನೂ ಪಡೆದಿದೆ.
ಕನ್ನಡದಲ್ಲಿ ಅಮೃತಬಳ್ಳಿ ಅಥವಾ ಅಮರದ ಬಳ್ಳಿ ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು ಟಿನೋಸ್ಪೋರಾ ಕಾರ್ಡಿಫೋಲಿಯ ಎಂದಾಗಿದೆ. ಸಂಸ್ಕೃತದಲ್ಲಿ ಇದನ್ನು ಆಮ್ರಾತಕ, ಮಧುಪರ್ಣಿ, ಗುಡುಚಿ, ಅಮೃತ, ವತ್ಸಾದನಿ, ಛಿನ್ನರುಹಾ, ಜೀವಂತಿಕಾ, ಸೋಮವಲ್ಲಿ, ತಂತ್ರಿಕಾಮೃತಾ ಎಂದು ಕರೆಯುತ್ತಾರೆ. ಅಮೃತಬಳ್ಳಿಯನ್ನು ಗುಡುಚಿ ಎಂದು ಕೂಡ ಸಾಮಾನ್ಯವಾಗಿ ಕರೆಯುತ್ತಾರೆ.
ಅಮೃತಬಳ್ಳಿಯ ಬೇರು, ಎಲೆ ಮತ್ತು ಕಾಂಡ ಹೀಗೆ ಎಲ್ಲದರಲ್ಲೂ ಔಷಧೀಯ ಗುಣವಿದ್ದರೂ ಕಾಂಡವನ್ನು ವಿವಿಧ ರೀತಿಯ ರೋಗಗಳ ನಿವಾರಣೆಗಾಗಿ ಪಾರಂಪರಿಕ ಮತ್ತು ಆಯುರ್ವೇದ ಔಷಧೀಯ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಕಾಂಡವನ್ನು ಹಸಿಯಾಗಿ, ಒಣಗಿಸಿ, ಅಥವಾ ಪುಡಿ ಮಾಡಿ ಕಷಾಯದ ರೂಪದಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ.
ಪ್ರಸ್ತುತ ಸನ್ನಿವೇಶದಲ್ಲಿ ಮಾನವ ಕುಲವನ್ನು ಕಾಡುತ್ತಿರುವ ಕೊರೋನಾ ಎಂಬ ಸೋಂಕಿನಿಂದ ರಕ್ಷಿಸಿಕೊಳ್ಳಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಒಳ್ಳೆಯದು ಎಂಬುವುದು ಆಯುರ್ವೇದ ತಜ್ಞರ ಅಂಬೋಣ.
ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಹಲವು ದಾರಿಗಳಿವೆ ಎಂದಿದ್ದಾರೆ ಆಯುರ್ವೇದ ವೈದ್ಯರಾದ ಡಾ. ಗಿರಿಧರ ಕಜೆ. ಅಮೃತಬಳ್ಳಿ ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕಷಾಯ ತಯಾರಿಸಿ ಪ್ರತಿದಿನ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಡಾ. ಕಜೆ ಹೇಳಿದ್ದಾರೆ.
ಸಾಮಾನ್ಯ ಜ್ವರದಿಂದ ಹಿಡಿದು ಮಲೇರಿಯಾ, ವಿಷಮಶೀತ ಜ್ವರ, ಟೈಫೋಯಿಡ್, ಮೆದುಳುಜ್ಚರ, ಚಿಕನ್ ಗುನ್ಯಾ ಮುಂತಾದ ಜ್ವರ ನಿವಾರಣೆಗೆ ಅಮೃತ ಬಳ್ಳಿ ಪರಿಣಾಮಕಾರಿ. ಕಾಮಾಲೆ (ಜಾಂಡಿಸ್), ಮೂತ್ರಕೋಶ ಸಂಬಂಧಿ ತೊಂದರೆಗಳು, ವಿವಿಧ ರೀತಿಯ ಉದರ ರೋಗಗಳ ಉಪಶಮನಕ್ಕೆ ಕೂಡ ಅಮೃತಬಳ್ಳಿಯ ಕಾಂಡದ ಕಷಾಯವನ್ನು ಉಪಯೋಗಿಸುತ್ತಾರೆ. ಕೆಲವು ವಿಷಕಾರಿ ಕೀಟ ಹಾಗೂ ಹಾವಿನ ಕಡಿತದ ನಂಜಿನ ಚಿಕಿತ್ಸೆಯಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಬಳ್ಳಿಯ ಕಾಂಡದ ಕಷಾಯದ ನಿಯಮಿತ ಸೇವನೆಯಿಂದ ಮಧುಮೇಹ (ಡಯಾಬೇಟಿಸ್), ರಕ್ತದೊತ್ತಡ (ಬಿ.ಪಿ), ಬೊಜ್ಜು (ಒಬೇಸಿಟಿ), ಪಾರ್ಶ್ವವಾಯು (ಸ್ಟ್ರೋಕ್), ಮತ್ತು ಹೃದಯದ ತೊಂದರೆಯನ್ನು ನಿವಾರಿಸಬಹುದಾಗಿದೆ ಎಂದು ಹೇಳಲಾಗಿದೆ. ಅಮೃತಬಳ್ಳಿಯಲ್ಲಿ ಇರುವ ಆ್ಯಂಟಿ ಕ್ಯಾನ್ಸರ್ ಅಂಶಗಳು ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳು ಬೆಳೆಯದಂತೆ ನೋಡಿಕೊಂಡು ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲೂ ನೆರವಾಗುತ್ತದೆ.
ಅಮೃತ ಬಳ್ಳಿಯ ಉಪಯೋಗಗಳು
1. ಅಮೃತಬಳ್ಳಿ ಕಾಂಡವನ್ನು ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕಷಾಯ ತಯಾರಿಸಿ ಪ್ರತಿದಿನ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ಕಷಾಯವನ್ನು ಕುಡಿಯುವುದರಿಂದ ಎಲ್ಲಾ ರೀತಿಯ ವೈರಲ್ ಜ್ವರ ಬೇಗ ವಾಸಿಯಾಗುತ್ತದೆ.
2. ಕೆಮ್ಮು ಹೆಚ್ಚಾಗಿ ಕಫ ಬರುತ್ತಿದ್ದರೆ ಅಮೃತಬಳ್ಳಿ ರಸಕ್ಕೆ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಕೆಮ್ಮು ಕಡಿಮೆಯಾಗಿ ಕಫ ಕರಗುತ್ತದೆ.
3. ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ 5 ಮಿಲಿ ಅಮೃತಬಳ್ಳಿ ಬೇರು ಮತ್ತು ಹೂವಿನಿಂದ ತಯಾರಿಸಿದ ಜ್ಯೂಸ್ ಸೇವಿಸಿದರೆ ಬುದ್ಧಿ ಚುರುಕಾಗಿ ಸ್ಮರಣ ಶಕ್ತಿ ಹೆಚ್ಚುತ್ತದೆ.
4. ಮಂಡಿಗಳಲ್ಲಿ ನೋವಿದ್ದರೆ ಅಮೃತಬಳ್ಳಿ ಎಲೆಗಳನ್ನು ಹರಳೆಣ್ಣೆ ಜೊತೆಗೆ ಹುರಿದು ಮಂಡಿಯ ಮೇಲೆ ಕಟ್ಟಿದರೆ ನೋವು ಬೇಗ ಕಡಿಮೆಯಾಗುತ್ತದೆ.
5. ಪಿತ್ತ ಹೆಚ್ಚಾಗಿ ದೇಹದಲ್ಲಿ ಉರಿ ಇದ್ದರೆ ಅಮೃತಬಳ್ಳಿ ಜ್ಯೂಸ್ಗೆ ಜೀರಿಗೆ ಸೇರಿಸಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ.
6. ಅಮೃತಬಳ್ಳಿ ಎಲೆಗಳ ರಸಕ್ಕೆ ಹಸುವಿನ ತುಪ್ಪ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ದೇಹದಲ್ಲಿ ಬೇರೆ ಬೇರೆ ರೀತಿಯ ಸಂಧಿ ನೋವಿದ್ದರೆ ನೋವು ನಿವಾರಣೆಯಾಗುತ್ತದೆ.
7. ಅಮೃತಬಳ್ಳಿ ರಸಕ್ಕೆ ಹಸಿ ಶುಂಠಿ ರಸ ಬೆರೆಸಿ ಸೇವಿಸಿದರೆ ಸಂಧಿಗಳ ಊತ ಮತ್ತು ನೋವು ವಾಸಿಯಾಗುತ್ತದೆ.
8. ಅಮೃತಬಳ್ಳಿ ಎಲೆಗಳನ್ನು ರುಬ್ಬಿ ವೀಳ್ಯೆದೆಲೆ ಮೇಲೆ ಇಟ್ಟು ಗಾಯದ ಮೇಲೆ ಕಟ್ಟಿದರೆ ಗಾಯ ಬೇಗ ಗುಣವಾಗುತ್ತದೆ
9. ಅಮೃತಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಗಳನ್ನು ಸಮಪ್ರಮಾಣದಲ್ಲಿ ನಯವಾಗಿ ಪುಡಿಮಾಡಿ 10ಗ್ರಾಂನಷ್ಟು ಶುದ್ಧ ನೀರು ಹಾಕಿ ಕಷಾಯ ಮಾಡಿ ಒಂದು ಬಾರಿಗೆ ಒಂದು ಟೀ ಚಮಚದಷ್ಟು ಕುಡಿಯುವುದರಿಂದ ಮೂತ್ರಕೋಶದಲ್ಲಿರುವ ಕಲ್ಲುಗಳು ಕ್ರಮೇಣವಾಗಿ ಕರಗುತ್ತದೆ.
10. ಅಮೃತ ಬಳ್ಳಿಯ ಎಲೆಗಳನ್ನು ರುಬ್ಬಿ ಅದಕ್ಕೆ ಅರಿಶಿನವನ್ನು ಸೇರಿಸಿ ಚರ್ಮದ ಮೇಲೆ ಹಚ್ಚಿದರೆ ಚರ್ಮರೋಗ ಗುಣವಾಗುತ್ತದೆ.