ದೇಶದ್ರೋಹ ಘೋಷಣೆ ಕೂಗಿ ಪೊಲೀಸರ ಅತಿಥಿಯಾಗಿರುವ ಅಮೂಲ್ಯ ಹಾಗೂ ಆದ್ರ್ರಾ ಇಬ್ಬರು ಸ್ನೇಹಿತರಾಗಿದ್ದು, ಒಂದೇ ರೂಂನಲ್ಲಿ ವಾಸವಿದ್ದರು ಎಂಬ ಸ್ಫೋಟಕ ಸತ್ಯ ತನಿಖೆ ವೇಳೆ ಹೊರಬಿದ್ದಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಿಎಎ ವಿರೋಧಿಸಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ 19 ವರ್ಷದ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿ ಭಾರೀ ವಿವಾದಕ್ಕೆ ಸಿಲುಕಿದ್ದಳು. ಹಾಗೇ ಮಾರನೇ ದಿನ ಅದೇ ಫ್ರೀಡಂ ಪಾರ್ಕ್ನಲ್ಲಿ ಅಮೂಲ್ಯಳ ದೇಶದ್ರೋಹ ಘೋಷಣೆ ವಿರೋಧಿಸಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆದ್ರ್ರಾ ಫ್ರೀ ಕಾಶ್ಮೀರಾ ನಾಮಫಲಕ ಪ್ರದರ್ಶಿಸಿ ಸಂಘಟನಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದಳು. ಇದೀಗಾ ಇಬ್ಬರನ್ನು ಬಂಧಿಸಿರುವ ನಗರ ಪೊಲೀಸರು ತೀವ್ರ ವಿಚಾರಣೆಗೆ ಒಳ ಪಡಿಸಿದ್ದಾರೆ. ಈ ಆಕೆಯ ಸ್ನೇಹಿತರನ್ನು ವಿಚಾರಣೆ ಮಾಡಿದ ವೇಳೆ ಅಮೂಲ್ಯ ಹಾಗೂ ಆದ್ರ್ರಾ ಸ್ನೇಹಿತರಾಗಿದ್ದು, ಒಂದೇ ರೂಮಿನಲ್ಲಿ ವಾಸವಿದ್ದರು ಎಂದು ತಿಳಿಸಿದ್ದಾರೆ.
ಇವರಿಬ್ಬರೂ ಮೊದಲೇ ಪರಿಚಿತರಾಗಿದ್ದು, ಬೆಂಗಳೂರಿನ ಪಿಜಿಯೊಂದರಲ್ಲಿ ರೂಂಮೇಟ್ಸ್ ಆಗಿದ್ದರು ಎಂದು ಹೇಳಲಾಗಿದೆ. ಅಮೂಲ್ಯ ಮತ್ತು ಆದ್ರ್ರಾ 2019ರ ಸೆಪ್ಟೆಂಬರ್ ನಿಂದ ಜನವರಿ 3 ತಿಂಗಳ ಕಾಲ ಒಂದೇ ರೂಮಿನಲ್ಲಿ ವಾಸವಾಗಿದ್ದರು. ಜನವರಿ ಬಳಿಕ ಆದ್ರ್ರಾ ಬೇರೆ ಪಿಜಿಯಲ್ಲಿ ವಾಸವಾಗಿದ್ದಳು ಎಂದು ಹೇಳಿದ್ದಾರೆ. ಈ ಬಗ್ಗೆ ಅಮೂಲ್ಯ ಹಾಗೂ ಆದ್ರ್ರಾ ಯಾವುದೇ ವಿಚಾರವನ್ನು ಪೊಲೀಸರಿಗೆ ಬಾಯ್ಬಿಡದೆ ಮುಚ್ಚಿಟ್ಟದ್ದರು. ಆದರೆ, ಆದ್ರ್ರಾಳ ಸ್ನೇಹಿತರನ್ನು ವಿಚಾರಣೆ ನಡೆಸಿದಾಗ ಇವರಿಬ್ಬರ ನಡುವಿನ ಸಂಬಂಧ ಬೆಳಕಿಗೆ ಬಂದಿದೆ.
ಸದ್ಯ, ಇಂದು ಬೆಳಗ್ಗೆ ಪೊಲೀಸರು ಅಮೂಲ್ಯಳನ್ನು ಆಕೆಯ ಪಿಜಿ ಬಳಿ ಸ್ಥಳ ಮಹಜರಿಗೆ ಕರೆದೊಯ್ಯಲಿದ್ದಾರೆ. ಅಮೂಲ್ಯಳ ತನಿಖೆಯ ಪ್ರತಿ ಹೇಳಿಕೆಯನ್ನು ವಿಡಿಯೋ ಮಾಡಲು ಪೊಲೀಸರು ಈಗಾಗಲೆ ಕ್ಯಾಮೆರಾ ತರಿಸಿಕೊಂಡಿದ್ದಾರೆ. ಈ ಬಗ್ಗೆ ಚಿಕ್ಕಪೇಟೆ ಎಸಿಪಿ ಮಹಾಂತೇಶ್ ರೆಡ್ಡಿ ತಂಡ ತನಿಖೆಯನ್ನು ಮುಂದುವರೆಸಿದ್ದಾರೆ.