ವಾಷಿಂಗ್ಟನ್: ಅಮೆರಿಕಾದಲ್ಲಿ ಕೊರೊನಾ ವೈರಸ್ ಸೋಂಕು ಅಟ್ಟಹಾಸ ಮೆರೆಯುತ್ತಿದೆ. ಅಮೆರಿಕಾದಲ್ಲಿ ಇದುವರೆಗೆ 7,64,000 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, 40,000 ಜನ ಈ ಮಾರಕ ವೈರಾಣುವಿಗೆ ಬಲಿಯಾಗಿದ್ದಾರೆ. ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಮೆರಿಕಾ ಹೋರಾಟ ನಡೆಸುತ್ತಿದ್ದು, ಅಮೆರಿಕಾದಲ್ಲಿರುವ ಭಾರತೀಯ ವೈದ್ಯರು ಇದಕ್ಕೆ ಸಾಥ್ ನೀಡುತ್ತಿದ್ದಾರೆ. ತನ್ನ ಜೀವದ ಹಂಗನ್ನು ತೊರೆದು ಕೊರೊನಾ ಪೀಡಿತರ ಚಿಕಿತ್ಸೆ ನಡೆಸಿದ ಮೈಸೂರು ಮೂಲದ ವೈದ್ಯೆಯೊಬ್ಬರಿಗೆ ಅಮೆರಿಕಾದ ಜನರು ಭಾವನಾತ್ಮಕ ಕೃತಜ್ಞತೆ ಸಲ್ಲಿಸಿರುವ ದೃಶ್ಯ ವೈರಲ್ ಆಗುತ್ತಿದೆ.
As I head to Mysuru, happy to share a video of Uma Madhusudhan, Mysuru origin Doctor in US being honoured in front of her house by grateful patients. It's a beautiful sight of cars, police vehicles, fire trucks lining up in gratitude, waving & honking to say Thank you Dr Uma! pic.twitter.com/42ayy6hEUd
— Dr Sudhakar K (@DrSudhakar_) April 21, 2020
ಅಮೆರಿಕಾದಲ್ಲಿ ವೈದ್ಯರಾಗಿರುವ ಮೈಸೂರು ಮೂಲದ ಡಾ.ಉಮಾ ಮಧುಸೂಧನ್ ತಮ್ಮ ಜೀವದ ಹಂಗನ್ನು ತೊರೆದು ಕೊರೊನಾ ಚಿಕಿತ್ಸೆ ನೀಡುತ್ತಿದ್ದರು. ಇವರಿಂದ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾದವರು ಇವರ ಸೇವೆಗೊಂದು ಅಭೂತಪೂರ್ವ ಗೌರವ ಹಾಗೂ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರೂ ಕೂಡಾ ಈ ವಿಡಿಯೋವನ್ನು ಹಂಚಿಕೊಂಡಿದ್ದು ಡಾ. ಉಮಾ ಅವರಿಗೆ ಕೊರೊನಾದಿಂದ ಗುಣಮುಖರಾದವರು, ಅಲ್ಲಿನ ಸರ್ಕಾರಿಸಂಸ್ಥೆಗಳು ಕೃತಜ್ಞತೆ, ಗೌರವ ತೋರಿದ ರೀತಿ ನೋಡಿ ತುಂಬಾ ಸಂತೋಷವಾಯಿತು. ಡಾ.ಉಮಾರವರ ಸೇವೆಗಳಿಗೆ ಧನ್ಯವಾದಗಳು ಎಂದು ಪ್ಲೇಕಾರ್ಡ್ ಪ್ರದರ್ಶಿಸುತ್ತಾ ಸಾಲು ಸಾಲು ವಾಹನಗಳು ಮುಂದೆ ಸಾಗಿದವು. ನಿಜಕ್ಕೂ ಸಾರ್ಥಕತೆಯನ್ನು ಕಂಡಂತಾಯಿತು ಎಂದು ಟ್ವೀಟ್ ಮಾಡಿದ್ದಾರೆ.








