ಪಂಚರಾಜ್ಯ ಚುನಾವಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಸಂದರ್ಶನ Saaksha Tv
ನವದೆಹಲಿ: ಪಂಚರಾಜ್ಯ ಚುನಾವಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಷ್ಟ್ರೀಯ ಸುದ್ದಿ ಸಂಸ್ಥೆಗೆ ವಿಶೇಷ ಸಂದರ್ಶನ ನೀಡಿ ಅನೇಕ ವಿಚಾರಗಳ ಬಗ್ಗೆ ಕೆಂದ್ರ ಸರ್ಕಾರದ ನಿಲುವು ಸ್ಪಷ್ಟ ಪಡಿಸಿದ್ದಾರೆ.
ಸಂದರ್ಶನದಲ್ಲಿ ನಿರೂಪಕಿಯೊಬ್ಬರು ಚುನಾವಣೆಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸೋಲು-ಗೆಲುವು ಸಮಾನವಾಗಿ ತೆಗೆದುಕೊಳ್ಳುವ ನಾವು, ಚುನಾವಣೆಯಲ್ಲಿ ಸೋತರೂ ಯಾವುದೇ ಆಶಾ ಭಾವನೆ ಕಳೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಪಂಚರಾಜ್ಯ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಹೇಳಿದರು.
ಇನ್ನೂ ಕೃಷಿ ಕಾಯ್ದೆ ಹಿಂಪಡೆದಿರುವ ಕುರಿತು ಮಾತನಾಡಿದ ಅವರು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಸುಧಾರಣೆ ಕಾನೂನು ಹಿಂಪಡೆದುಕೊಂಡಿರುವುದು ರೈತರ ಹಿತಕ್ಕಾಗಿ. ನಾನು ರೈತರ ಮನಸ್ಸು ಗೆಲ್ಲುವ ಕೆಲಸ ಮಾಡಿದ್ದೇನೆ. ಅವರ ಪರವಾಗಿ ಹೆಜ್ಜೆ ಇಟ್ಟಿದ್ದೇನೆ.
ಅಲ್ಲದೇ ದೇಶದಲ್ಲಿರುವ ಸಣ್ಣ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ಗೊತ್ತಿದೆ. ದೇಶದಾದ್ಯಂತ ರೈತರ ಅನುಕೂಲಕ್ಕಾಗಿ ಕೇಂದ್ರವು ಕೃಷಿ ಕಾನೂನುಗಳನ್ನು ಪರಿಚಯಿಸಿದೆ, ಆದರೆ ರಾಷ್ಟ್ರದ ಹಿತಾಸಕ್ತಿಯಿಂದ ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದರು
ಈ ವೇಳೆ ನರೇಂದ್ರ ಮೋದಿ, ಚುನಾವಣೆ ನಡೆಯುತ್ತಿರುವ ಎಲ್ಲ ಐದು ರಾಜ್ಯಗಳಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ ದೇಶದ ಎಲ್ಲ ರಾಜ್ಯಗಳೂ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿವೆ. ಆದರೆ ಒಂದು ರಾಜ್ಯ ಮಾತ್ರ ದೂರ ಉಳಿದಿದೆ. ಇದು ದೌರ್ಭಾಗ್ಯದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಫಿರೋಜ್‌ಪುರ ಭದ್ರತಾ ಲೋಪದ ಬಗ್ಗೆ ಮಾತನಾಡಿ ಈ ಕುರಿತು ನಾನು ಮೌನ ವಹಿಸಿದ್ದೇನೆ. ಸುಪ್ರೀಂ ಕೋರ್ಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಈ ನಿಟ್ಟಿನಲ್ಲಿ ನಾನು ನೀಡುವ ಯಾವುದೇ ಹೇಳಿಕೆ ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಸರಿಯಲ್ಲ” ಎಂದು ಮೋದಿ ಹೇಳಿದರು.









