ಸಿಎಂ ಮಾತಿಗೆ ಬೆಲೆ ಕೊಟ್ಟು ಅಧಿಕಾರ ಸ್ವೀಕರಿಸ್ತೀನಿ : ಆನಂದ್ ಸಿಂಗ್
ಬೆಂಗಳೂರು : ನಿರೀಕ್ಷಿತ ಖಾತೆ ಸಿಗಲಿಲ್ಲ ಎಂದು ಬೇಸರಗೊಂಡಿರುವ ಸಚಿವ ಆನಂದ್ ಸಿಂಗ್ ಶೀಘ್ರದಲ್ಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಅವರು ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಆನಂದ್ ಸಿಂಗ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕ ವಿಕಾಸ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಕಚೇರಿಗೆ ಹೋಗಿ ಬೊಮ್ಮಾಯಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ.
ಅವರು ನೀವು ಮೊದಲು ಖಾತೆ ಕೆಲಸ ಪ್ರಾರಂಭ ಮಾಡಿ ಎಂದು ಹೇಳಿದ್ದಾರೆ. ಮೊದಲು ಖಾತೆ ಅಧಿಕಾರ ಪಡೆಯಿರಿ ನಂತರ ನಾನು ನಿಮ್ಮ ಮನವಿಯನ್ನು ಪರಿಗಣಿಸಿ ಸೂಕ್ತವಾದ ಕ್ರಮ ಕೈಗೊಂಡು, ಹೈಕಮಾಂಡ್ ಜೊತೆ ಮಾತನಾಡುತ್ತೇನೆ ಅಂತ ತಿಳಿಸಿದ್ದಾರೆ.
ಹೀಗಾಗಿ ನಾನು ಸಿಎಂ ಹಾಗೂ ರಾಜ್ಯಾಧ್ಯಕ್ಷರ ಮಾತಿಗೆ ಬೆಲೆ ಕೊಟ್ಟು ಅಧಿಕಾರ ಸ್ವೀಕಾರ ಮಾಡುತ್ತೇನೆ ಎಂದಿದ್ದಾರೆ. ಆ ಮೂಲಕ ಆನಂದ್ ಸಿಂಗ್ ರಾಜೀನಾಮೆ ಸುದ್ದಿಗೆ ಫುಲ್ ಸ್ಟಾಪ್ ಬಿದ್ದಂತಾಗಿದೆ.
ಅಂದಹಾಗೆ ಬೊಮ್ಮಾಯಿ ಸಂಪುಟದಲ್ಲಿ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಜೀವಶಾಸ್ತ್ರ ಹಾಗೂ ಪರಿಸರ ಖಾತೆಯನ್ನು ನೀಡಲಾಗಿದೆ. ಖಾತೆ ಹಂಚಿಕೆ ಆಗುತ್ತಿದ್ದಂತೆ ಮುನಿಸಿಕೊಂಡಿದ್ದ ಆನಂದ್ ಸಿಂಗ್, ರಾಜೀನಾಮೆ ನೀಡುವ ಬಗ್ಗೆ ಮಾತುಗಳನ್ನಾಡಿದ್ದರು.
ಅಲ್ಲದೆ ಇಂದು ಅಥವಾ ನಾಳೆ ರಾಜೀನಾಮೆ ಕೊಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಅವರು ತಮ್ಮ ರಾಜೀನಾಮೆಯಿಂದ ಆನಂದ್ ಸಿಂಗ್ ಹಿಂದೆ ಸರಿದಿದ್ದು, ನೀಡಿರುವ ಖಾತೆಯನ್ನೇ ಸದ್ಯ ಮುಂದುವರಿಸುವುದಾಗಿ ತಿಳಿಸಿದ್ದಾರೆ.









