ಸಿಕ್ಕ ಖಾತೆಯಲ್ಲಿ `ಆನಂದ’ವಿಲ್ಲ : ಖಾತೆ ಹಂಚಿಕೆ ಬೆನ್ನಲ್ಲೆ ಅಸಮಾಧಾನ ಸ್ಫೋಟ
ಬಳ್ಳಾರಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇದರ ಬೆನ್ನೆಲ್ಲೆ ಇದೀಗ ಅಸಮಾಧಾನ ಸ್ಫೋಟಗೊಂಡಿದ್ದು, ನಾನು ಕೇಳಿದ ಖಾತೆ ಬೇರೆ ನನಗೆ ಕೊಟ್ಟಿರುವ ಖಾತೆ ಬೇರೆ ಎಂದು ಪ್ರವಾಸೋದ್ಯಮ ಪರಿಸರ ಇಲಾಖೆ ಸಚಿವ ಆನಂದ್ ಸಿಂಗ್ ಬೇಸರ ಹೊರಹಾಕಿದ್ದಾರೆ.
ಖಾತೆ ಹಂಚಿಕೆ ಬಗ್ಗೆ ಬಳ್ಳಾರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಮೊದಲು ರಾಜೀನಾಮೆ ಕೊಟ್ಟಿದ್ದೇ ನಾನು. ಮೇ ಒಂದರಂದು ನಾನು ರಾಜೀನಾಮೆ ನೀಡಿದ್ದೆ. ನನ್ನಿಂದಲೇ ಬಿಜೆಪಿ ಸರ್ಕಾರ ಬಂದಿದೆ ಅನ್ನೋದಲ್ಲ. ನನ್ನಂತೆ ಹಲವು ಜನರು ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆಯಾಗಿದೆ. ಆದರೆ ಇದೀಗ ಖಾತೆ ಹಂಚಿಕೆಯಲ್ಲಿ ನಾನು ಕೇಳಿರೋದೇ ಒಂದು ಕೊಟ್ಟಿರೋದೇ ಒಂದು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಅಲ್ಲದೆ ಖಾತೆ ಬದಲಾವಣೆ ಮಾಡಬೇಕೆಂದು ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಯಿ ಅವರನ್ನು ಕೇಳುತ್ತೇನೆ ಎಂದ ಆನಂದ್ ಸಿಂಗ್, ಯಡಿಯೂರಪ್ಪ ಸರ್ಕಾರದ ವೇಳೆಯೂ ಎರಡು ದಿನದಲ್ಲಿ ಮೂರು ಖಾತೆ ಬದಲಾಯಿಸಿದ್ದರು. ಇದು ಅವಮಾನ ಅಲ್ಲ ಆದರೆ ನಿರಾಸೆ ಮಾಡಿರೋದಕ್ಕೆ ಸಾಕಷ್ಟು ಬೇಸರವಾಗಿದೆ. ಮತ್ತೊಮ್ಮೆ ಸಿಎಂಗೆ ಮನವಿ ಮಾಡುತ್ತೇನೆ ಕೊಡದೆ ಇದ್ದರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.