ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ : ಆರ್.ಅಶೋಕ್
ಬೆಂಗಳೂರು : ಖಾತೆ ಹಂಚಿಕೆ ಬಳಿಕ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ಇದೀಗ ಥಂಡಾ ಹೊಡೆದು ಕೊಟ್ಟಿರುವ ಖಾತೆಯನ್ನೇ ಒಪ್ಪಿಕೊಂಡು ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಈ ವಿಚಾರವಾಗಿ ಸಚಿವ ಆರ್ ಅಶೋಕ್ ಪ್ರತಿಕ್ರಿಯೆ ನೀಡಿದ್ದು, ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ. ಆನಂದಸಿಂಗ್ ಒಳ್ಳೆಯ ಮುಹೂರ್ತಕ್ಕೆ ಕಾಯುತ್ತಿದ್ದರು ಎಂದಿದ್ದಾರೆ.
ಇಂದು ಆನಂದ್ ಸಿಂಗ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಆನಂದ್ ಸಿಂಗ್ ಮುಖ್ಯಮಂತ್ರಿಗಳ ಭೇಟಿ ಬಳಿಕ ಕೊಟ್ಟಿರುವ ಖಾತೆಯಲ್ಲಿ ಮುಂದುವರೆಯುದಾಗಿ ತಿಳಿಸಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದರು.
ಈ ಬಗ್ಗೆ ಆರ್ ಅಶೋಕ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿ, ನಾನು ಈ ಹಿಂದೆ ಅವರನ್ನು ಭೇಟಿಯಾಗಿದ್ದೆ, ಆಗ ಸಮಸ್ಯೆ ಹೇಳಿಕೊಂಡಿದ್ದರು. ಮಾನ್ಯ ಮುಖ್ಯಮಂತ್ರಿಗಳೊಂದಿಗೂ ಚರ್ಚೆ ನಡೆಸಿದ್ದೇವೆ.
ಸಿಎಂ ಒಂದು ಅಥವಾ ಎರಡು ದಿನಗಳಲ್ಲಿ ನವದೆಹಲಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಅಲ್ಲಿ ಅವರು ಸಿಂಗ್ ಜೊತೆಗಿನ ಚರ್ಚೆಯನ್ನು ಪಕ್ಷದ ಹೈಕಮಾಂಡ್ ಗೆ ತಲುಪಿಸುತ್ತಾರೆ.
ನಮ್ಮ ಪಕ್ಷದಲ್ಲಿ ಅಸಮಾಧಾನವೇನು ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರವು ಉತ್ತಮ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.