‘ಅಂಡಮಾನ್’ ಹೆಸರಿನ ಹಿಂದಿದೆ ರೋಚಕ ಕಥೆ..! ಇಲ್ಲಿಯ ಜೈಲು ವರ್ಲ್ಡ್ ಫೇಮಸ್ಸು..!
ಭಾರತ ತನ್ನ ಅತ್ಯದ್ಭುತ ಪ್ರಾಕೃತಿಕ ತಾಣಗಳಿಗೆ ಹೆಸರುವಾಸಿ. ಅದರಲ್ಲೂ ಇಲ್ಲಿಯ ಸುಂದರ ಸಮುದ್ರ ತೀರಗಳಿಗೆ ಭೇಟಿ ನೀಡಲು ದೇಶ- ವಿದೇಶಗಳಿಂದ ಪ್ರವಾಸಿಗರು ಆಗಮಿಸ್ತಿರುತ್ತಾರೆ. ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲೊಂದಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ತಮ್ಮ ಅತ್ಯದ್ಭುತ ಕಡಲ ಕಿನಾರೆಗಳಿಗೆ ಫೇಮಸ್. ಏಷ್ಯಾದ ಸುಂದರ ಬೀಚುಗಳಲ್ಲೊಂದಾದ ರಾಧಾನಗರ ಬೀಚ್ ಇರುವುದು ಇಲ್ಲಿಯೇ. ಕಡಿಮೆ ಜನಸಂಖ್ಯೆ ಹೊಂದಿರುವ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಬೀಚ್ ಗಳನ್ನು ಹೊರತುಪಡಿಸಿ ಸಾಕಷ್ಟು ಪ್ರವಾಸಿ ತಾಣಗಳಿವೆ.
‘ಅಂಡಮಾನ್’ ಹೆಸರಿನ ಹಿಂದಿದೆ ರೋಚಕ ಕಥೆ..!
ಒಂದಾನೊಂದು ಕಾಲದಲ್ಲಿ ಮಲೇಷಿಯಾ ಹಾಗು ಸೋಮಾಲಿಯಾ ಕಡಲ್ಗಳ್ಳರು ಗುಲಾಮರನ್ನು ಪಡೆಯುವ ಉದ್ದೇಶಕ್ಕಾಗಿ ಇಲ್ಲಿಗೆ ಬಂದಿದ್ದರಂತೆ. ಆಗ ಸ್ಥಳೀಯ ಜನರ ಮುಖ ಲಕ್ಷಣವು ಮಂಗಗಳೊಂದಿಗೆ ಹೋಲಿಕೆಯಾಗುತ್ತಿದ್ದುದನ್ನು ಕಂಡು ಅವರೆಲ್ಲ ಈ ಪ್ರದೇಶಕ್ಕೆ ಮಂಗ ಮುಖದ ಜನರುಗಳು ವಾಸಿಸುವ ಭೂಮಿ ಎಂಬರ್ಥದಲ್ಲಿ ಇದಕ್ಕೆ ಹಂಡುಮಾನ್ ಅಂದ್ರೆ ಹನುಮಾನ್ ಎಂಬ ಹೆಸರಿನ್ನಿಟ್ಟಿದ್ದರು ಎಂದು ಹೇಳಲಾಗುತ್ತದೆ. ಕ್ರಮೇಣ ಈ ಹೆಸರು ಆಡುಭಾಷೆಯಲ್ಲಿ ಅಂಡಮಾನ್ ಎಂದು ಬದಲಾಯಿತು ಎನ್ನಲಾಗುತ್ತದೆ.
ಬಂಗಾಳ ಕೊಲ್ಲಿಯಲ್ಲಿವೆ ಈ ಸುಂದರ ದ್ವೀಪಗಳು..!
ಬಂಗಾಳ ಕೊಲ್ಲಿ ಹಾಗು ಅಂಡಮಾನ್ ಸಮುದ್ರದ ಸಂಗಮ ಸ್ಥಳದಲ್ಲಿರುವ ಈ ದ್ವೀಪಗಳ ಸಮೂಹವು ಇಂಡೋನೇಷಿಯಾ ದೇಶದ ಆಚೆ ಎಂಬ ಪ್ರದೇಶದಿಂದ ಕೇವಲ 150 ಕಿ.ಮೀ ದೂರದಲ್ಲಿದೆ. ಅಂಡಮಾನ್ ಹಾಗು ನಿಕೋಬಾರ್ ಎರಡು ಪ್ರತ್ಯೇಕವಾದ ದ್ವೀಪ ಸಮೂಹಗಳಾಗಿದ್ದು ಕ್ರಮವಾಗಿ ಉತ್ತರಕ್ಕೂ ಹಾಗು ದಕ್ಷಿಣಕ್ಕೂ ಸ್ಥಿತವಾಗಿವೆ. ಈ ದ್ವೀಪ ಸಮೂಹವನ್ನು ಹಡುಗು ಅಥವಾ ವಿಮಾನ ಪ್ರಯಾಣದ ಮೂಲಕ ಮಾತ್ರ ತಲುಪಬಹುದಾಗಿದೆ. 1950 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವು ಭಾರತದ ಅವಿಭಾಜ್ಯ ಅಂಗವಾಗಿ 1956 ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲ್ಪಟ್ಟವು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಒಟ್ಟಾರೆಯಾಗಿ 572 ದ್ವೀಪಗಳಿವೆ. ಇದರ ಒಟ್ಟಾರೆ ವಿಸ್ತೀರ್ಣ 7,950 ಚ.ಕಿ.ಮೀ.
ಈ ದ್ವೀಪ ಜಲ ಕ್ರೀಡೆಗಳಿಗೆ ಫೇಮಸ್ ..!
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಡೈವಿಂಗ್, ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಮತ್ತು ಸರ್ಫಿಂಗ್‌ನಂತಹ ಜಲ ಕ್ರೀಡೆಗಳನ್ನು ಆನಂದಿಸಲು ಭಾರತದಲ್ಲಿನ ಅತ್ಯುತ್ತಮ ಸ್ಥಳವಾಗಿದೆ. ಹ್ಯಾವ್ಲಾಕ್ ದ್ವೀಪದಲ್ಲಿ ಕೆಲವು ಅತ್ಯುತ್ತಮ ಕಡಲತೀರಗಳು ಮತ್ತು ಡೈವಿಂಗ್ ಲಭ್ಯವಿದೆ. ಅಲ್ಲದೇ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮುದ್ರ ದಂಡೆಗಳು ನೋಡಲು ವಿಹಂಗಮವಾಗಿದ್ದು, ಉತ್ಕೃಷ್ಟವಾದ ರಜೆಯ ಅನುಭವವನ್ನು ಕರುಣಿಸುತ್ತವೆ.
ಇಲ್ಲಿಯ ಜೈಲು ವರ್ಲ್ಡ್ ಫೇಮಸ್ಸು..!
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕೇವಲ ತನ್ನ ಅತ್ಯದ್ಭುತ ಸಮುದ್ರ ತೀರಗಳಿಗಷ್ಟೇ ಪ್ರಸಿದ್ಧಿ ಪಡೆದಿಲ್ಲ. ಬದಲಿಗೆ ಇಲ್ಲಿಯ ಸೆಲ್ಯುಲರ್ ಜೈಲು ಸಹ ಸದಾ ಪ್ರವಾಸಿಗರಿಂದ ಗಿಜುಗುಡುತ್ತಿರುತ್ತದೆ. ಇದೊಂದು ಸುಪ್ರಸಿದ್ಧವಾದ ರಾಷ್ಟ್ರೀಯ ಸ್ಮಾರಕವಾಗಿದೆ. ಹಿಂದಿನ ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡಿ ಹಾಕಿ ಅವರಿಗೆ ನೀಡಲಾದ ಅಮಾನವೀಯ ಕೃತ್ಯಗಳ ಕರುಣಾಜನಕ ಕಥೆಯನ್ನು ಸಾರಿ ಹೇಳುತ್ತಿದೆ ಈ ಜೈಲು. ಸ್ವಾತಂತ್ರ್ಯಪ್ರಿಯ ಪ್ರವಾಸಿಗರಿಗೆ ಇದೊಂದು ಯಾತ್ರಾಕ್ಷೇತ್ರ ಎಂಬಂತಾಗಿದೆ.
ಇಲ್ಲಿಗೆ ಹೀಗೆ ತಲುಪಿ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಿಮಾನ ಮತ್ತು ಹಡಗುಗಳ ಮೂಲಕ ತಲುಪಬಹುದು. ದೇಶದ ಮುಖ್ಯನಗರಗಳಿಂದ ರಾಜಧಾನಿ ಪೋರ್ಟ್ಬ್ಲೇರ್ ಗೆ ನೇರವಾಗಿ ವಿಮಾನ ಸಂಪರ್ಕವಿದೆ. ಇನ್ನು ಚೆನ್ನೈ, ವಿಶಾಖಪಟ್ಟಣಂ ನಿಂದ ಅಂಡಮಾನ್ ದ್ವೀಪಕ್ಕೆ ಕ್ರೂಸ್ ಮೂಲಕ ತೆರಳಬಹುದು. ಆದರೆ ತಿಂಗಳಲ್ಲಿ ಮೂರು ಅಥವಾ ನಾಲ್ಕು ಬಾರಿ ಮಾತ್ರ ಈ ಪ್ರಯಾಣ ಲಭ್ಯವಿರುತ್ತದೆ.
ಇಲ್ಲಿರುವ ಅದ್ಭುತವಾದ ಪ್ರಕೃತಿಯ ಸೊಬಗು, ವಿಶಿಷ್ಟವಾದ ಬುಡಕಟ್ಟು ಜನಾಂಗ, ವೈವಿಧ್ಯಮಯ ಜಲಜೀವ ರಾಶಿಗಳು, ಅತಿ ವಿರಳ ಜನಸಂಖ್ಯೆ, ನಿಶ್ಕಲ್ಮಶ ವಾತಾವರಣ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
ಅಂಡಮಾನ್ ನಲ್ಲಿ ಉಳಿದುಕೊಳ್ಳಲು ಸಾಕಷ್ಟು ರೆಸಾರ್ಟ್ ಗಳಿವೆ. ಸೀ ಫುಡ್ ಪ್ರಿಯರಿಗೆ ಬಾಯಿ ಚಪ್ಪರಿಸುವಂತೆ ಮಾಡುವ ಪ್ರಸಿದ್ಧ ರೆಸ್ಟೋರೆಂಟ್ ಗಳಿವೆ.
ಅಂಡಮಾನಿನ ಹ್ಯಾವ್ಲಾಕ್ ನಡುಗಡ್ಡೆಯ ರಾಧಾನಗರ ಕಡಲ ತೀರವು ಅತ್ಯಂತ ರೋಮಾಂಚಕವಾದ ಹಾಗೂ ಕಣ್ಣಿಗೆ ಹಬ್ಬವನ್ನುಂಟು ಮಾಡುವ ಸುಂದರ ಕಡಲ ತೀರವಾಗಿದೆ. ಪ್ರತಿಷ್ಠಿತ ಟೈಮ್ ನಿಯತಕಾಲಿಕೆಯು ಈ ಕಡಲ ತೀರವನ್ನು 2004 ರಲ್ಲಿ ಏಷಿಯಾದ ಅತಿ ಸುಂದರ ಕಡಲ ತೀರ ಹಾಗೂ ಜಗತ್ತಿನ ಏಳನೆಯ ಅದ್ಭುತ ಕಡಲ ತೀರ ಎಂಬ ಪಟ್ಟವನ್ನು ಕಟ್ಟಿದೆ.
ಇನ್ನು ಇಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಅತಿ ಕಡಿಮೆ ಪ್ರಮಾಣದಲ್ಲಿ ನಡೆಯುತ್ತವೆ. ಅಂಡಮಾನ್ ಮತ್ತು ನಿಕೋಬಾರ್ ಸರ್ಕಾರಕ್ಕೆ ಪ್ರವಾಸೋದ್ಯಮವು ಅತಿ ಮುಖ್ಯವಾದ ಆದಾಯದ ಮೂಲವಾಗಿದೆ.
ನವದಂಪತಿಗಳ ಹಾಟ್ ಫೇವ್ರೇಟ್ ಈ ದ್ವೀಪಗಳು..!!
ಅಂಡಮಾನ್ ಮತ್ತು ನಿಕೋಬಾರ್ ಕೇವಲ ಕಡಲ ತೀರಗಳಿಗಷ್ಟೆ ಅಲ್ಲದೆ ವೈವಿಧ್ಯಮಯ ಪಕ್ಷಿಗಳು, ಬಣ್ಣ ಬಣ್ಣದ ಹೂವುಗಳು ಮತ್ತು ಹಲವು ದಟ್ಟ ಅರಣ್ಯಗಳು ಹಾಗೂ ಸಾಕಷ್ಟು ವೈವಿಧ್ಯಮಯ ಜೀವರಾಶಿಗಳಿಗೆ ಹೆಸರುವಾಸಿಯಾಗಿದೆ. ನವ ದಂಪತಿಗಳ ಪಾಲಿಗಂತೂ ಇದು ಸ್ವರ್ಗವೇ ಸರಿ. ಸಾಕಷ್ಟು ಟೂರಿಸಂ ಕಂಪನಿಗಳು ಅಂಡಮಾನ್ ಗೆಂತಲೇ ಹಲವು ಹನಿಮೂನ್ ಪ್ಯಾಕೇಜ್ ಗಳನ್ನು ಮಾಡಿವೆ. ಇಲ್ಲಿಯ ಅಲಂಕಾರಿಕ ಚಿಪ್ಪುಗಳ ಬೃಹತ್ ಮಾರುಕಟ್ಟೆ ಮನಸೂರೆಗೊಳ್ಳುತ್ತದೆ.
ಜಾಲಿಬಾಯ್ ದ್ವೀಪ, ಹ್ಯಾವ್ಲಕ್ ದ್ವೀಪ, ಸಿಕ್ಯೂ ದ್ವೀಪ, ರಾಸ್ ದ್ವೀಪ ಮತ್ತು ವಂದೂರು ಸೀ ಗಾರ್ಡನ್ ಹೆಚ್ಚು ಪ್ರಸಿದ್ದಿ ಪಡೆದ ಸ್ಥಳಗಳು.
ಇನ್ನು ಕೋವಿಡ್ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡಲು ಸದ್ಯ ಕೆಲವು ಶರತ್ತುಗಳನ್ನು ಸ್ಥಳೀಯ ಸರ್ಕಾರ ವಿಧಿಸಿದೆ. ೭೨ ಗಂಟೆಗಳ ಮುನ್ನ ಮಾಡಿದ ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ದ್ವೀಪಗಳಿಗೆ ಪ್ರವೇಶವಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಕೆಲವು ರೆಸಾರ್ಟ್ ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಅಲ್ಲಿಗೆ ತೆರಳುವ ಮುನ್ನವೇ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು.