ಪೂಜೆಯ ನೆಪದಲ್ಲಿ ಮಗಳ ಬಾಯಿಗೆ ಕುಂಕುಮ ತುಂಬಿದ ತಂದೆ – ಉಸಿರಾಡಲಾಗದೆ ಬಾಲಕಿ ಸಾವು….
ಮಗಳಿಗೆ ದುಷ್ಟ ಶಕ್ತಿ ಹಿಡಿದಿದೆ ಎಂದು ನಂಬಿದ್ದ ತಂದೆ ಪೂಜೆಯ ವೇಳೆ ಮಗಳ ಬಾಯಿಗೆ ಅರಿಶಿನ ಕುಂಕುಮ ತುಂಬಿದ್ದಾನೆ. ಪರಿಣಾಮ ಮಗಳು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ನೆಲ್ಲೂರು ಜಿಲ್ಲೆಯ ಪೇರರೆಡ್ಡಿಪಲ್ಲಿ ಗ್ರಾಮದ ವೇಣುಗೋಪಾಲ್ ದಂಪತಿಗೆ ನಾಲ್ಕು ವರ್ಷದ ಅವಳಿ ಜವಳಿ ಬಾಲಕಿಯರಿದ್ದರು. ಅದರಲ್ಲಿ ಒಬ್ಬಳಿಗೆ ದುಷ್ಟ ಶಕ್ತಿಯ ಕಾಟ ಇದೆ ಅಂತ ಬಾಲಕಿಯರ ತಂದೆಗೆ ಯಾರೋ ಹೇಳಿದ್ದರಂತೆ. ಇದನ್ನೇ ಗಂಭೀರವಾಗಿ ತೆಗೆದುಕೊಂಡ ತಂದೆ, ದುಷ್ಟ ಶಕ್ತಿ ಓಡಿಸಬೇಕು ಎಂಬ ಆತುರಕ್ಕೆ ಬಿದ್ದು ಮಗಳ ಜೀವವನ್ನೆ ತೆಗೆದಿದ್ದಾನೆ.
ದುಷ್ಟ ಶಕ್ತಿ ನಿವಾರಣೆ ಪೂಜೆ ನೆಪದಲ್ಲಿ 4 ವರ್ಷದ ಪುಟ್ಟ ಬಾಲಕಿ ಪುನರ್ವಿಕಾ ಮೇಲೆ ಅರಿಶಿನದ ನೀರು ಸುರಿದು ನಂತರ ಬಾಯಿಗೆ ಅರಿಶಿನ ಕುಂಕುಮದ ಪುಡಿ ತುಂಬಿಸಿ ಪೂಜೆ ಸಲ್ಲಿಸಿದ್ದಾನೆ. ಈ ವೇಳೆ ಪುಟ್ಟ ಬಾಲಕಿಗೆ ಉಸಿರುಗಟ್ಟಿದಂತಾಗಿದೆ. ಮಗು ಉಸಿರಾಡಲಾಗದೇ ಒದ್ದಾಡಿದೆ.
ನಂತರ ಮನೆಯರು ಕೂಗಿಕೊಂಡಿದ್ದಾರೆ, ಸಹಾಯಕ್ಕೆ ಬಂದ ಸ್ಥಳಿಯರು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ. ಬಾಲಕಿ ಗಂಭೀರವಾಗಿದ್ದರಿಂದ ಚೆನ್ನೈ ಆಸ್ಪತ್ರೆಗೆ ಸೇರಿಸಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಮಗು ಸಾವಿನಿಂದ ಆಕ್ರೋಶಗೊಂಡ ಸ್ಥಳೀಯರು ಮೃತ ಮಗುವಿನ ತಂದೆ ವೇಣುಗೋಪಾಲ್ಗೆ ಚೆನ್ನಾಗಿ ಥಳಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿ ತಂದೆ ವೇಣುಗೋಪಾಲ್ನನ್ನು ಬಂಧಿಸಿದ್ದಾರೆ.