ಚಿಕ್ಕಮಗಳೂರು: ವ್ಯಕ್ತಿಯೊಬ್ಬ ಮದುವೆಯಾಗಿದ್ದ ಮಹಿಳೆಯನ್ನು ಪ್ರೀತಿಸಿ, ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಬಾಳೆಹೊನ್ನೂರು ಸಮೀಪದ ಕಿಚ್ಚಂಬಿ ಎಂಬಲ್ಲಿ ನಡೆದಿದೆ. ತೃಪ್ತಿ ಎಂಬ ಮಹಿಳೆ ಕೊಲೆಯಾದವರು. ಚಿರಂಜೀವಿ ಕೊಲೆ ಮಾಡಿರುವ ವ್ಯಕ್ತಿ. ತೃಪ್ತಿ ಜೊತೆ ಆರೋಪಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ. ಇತ್ತೀಚೆಗೆ ತೃಪ್ತಿ ಆತನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಈ ಕುರಿತು ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಇಬ್ಬರನ್ನೂ ಹುಡುಕಿ ಕರೆ ತಂದಿದ್ದರು.
ಆನಂತರ ರಾಜಿ ಸಂಧಾನದಲ್ಲಿ ಮಹಿಳೆಯು ಪತಿಯೊಂದಿಗೆ ತೆರಳಿದ್ದಳು. ಹೀಗಾಗಿ ಪ್ರಿಯಕರನೊಂದಿಗೆ ಮಾತು ಬಿಟ್ಟಿದ್ದಳು. ಇದರಿಂದ ಕೋಪಗೊಂಡಿದ್ದ ಆರೋಪಿ, ಆಕೆಯ ಮಕ್ಕಳ ಎದುರೇ ಚಾಕುವಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆನಂತರ ಶವವನ್ನು ಗ್ರಾಮದ ಸಮೀಪದ ಕೆರೆಗೆ ಬಿಸಾಡಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಇಬ್ಬರೂ ಪರಿಚಯವಾಗಿದ್ದರು. ಆನಂತರ ಇಬ್ಬರೂ ಸಂಪರ್ಕ ಬೆಳೆಸಿದ್ದರು.