ಬೆಂಗಳೂರು: ಬೆಂಗಳೂರಿನಲ್ಲಿರುವ ಮಧ್ಯಪ್ರದೇಶ ಶಾಸಕರ ಭೇಟಿಗೆ ಅವಕಾಶ ನೀಡುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಇಂದು ಮಧ್ಯಪ್ರದೇಶದ ಶಾಸಕರನ್ನು ಭೇಟಿ ಮಾಡಲು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ರಮಾಡ ಹೋಟೆಲ್ ಗೆ ಆಗಮಿಸಿದ್ದರು. ಆದ್ರೆ ಶಾಸಕರನ್ನು ಭೇಟಿ ಮಾಡಲು ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಬೇಸರಗೊಂಡ ದಿಗ್ವಿಜಯ್ ಸಿಂಗ್ ಅವರು ಅಲ್ಲೇ ಪ್ರತಿಭಟನೆಗೆ ಮುಂದಾದರು. ಇದರಿಂದಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದ್ರು. ಈ ವೇಳೆ ಅಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೂ ಸಹ ಇದ್ದರು. ಬಳಿಕ ಜಾಮೀನಿನ ಮೇಲೆ ಠಾಣೆಯಿಂದ ಹೊರಬಂದ ಕಾಂಗ್ರೆಸ್ ನಾಯಕರು ನೇರವಾಗಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದಾರೆ. ಬಿಜೆಪಿ ವಿರುದ್ಧ ಧಿಕ್ಕಾರ ಕೂಗುತ್ತಾ, ದಿಗ್ವಿಜಯ್ ಸಿಂಗ್ ಜೊತೆ ಡಿ.ಕೆ ಶಿವಕುಮಾರ್, ರಿಜ್ವಾನ್ ಅರ್ಷದ್, ಹ್ಯಾರೀಸ್ ಸೇರಿ ಕೆಲ ಕಾಂಗ್ರೆಸ್ ಮುಖಂಡರು ಕಮೀಷನರ್ ರನ್ನ ಭೇಟಿಯಾಗಿದ್ದಾರೆ. ಆದ್ರೆ ಕಮಿಷನರ್ ಭಾಸ್ಕರ್ ರಾವ್ ಮಾತ್ರ ಶಾಸಕರ ಭೇಟಿಗೆ ಅವಕಾಶ ನೀಡದೆ, ಇದು ನನ್ನ ವ್ಯಾಪ್ತಿ ಬರಲ್ಲ, ನೀವು ಡಿಜಿ-ಐಜಿಪಿಯವರನ್ನ ಕೇಳಿ ಎಂದು ಉತ್ತರಿಸಿದ್ದಾರೆ.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಡಿ.ಕೆ ಶಿವಕುಮಾರ್, ಡಿಸಿಪಿ ಅವರನ್ನ ಕೇಳಿದ್ರೆ ಕಮಿಷನರ್ ರನ್ನ ಕೇಳಬೇಕು ಅಂತಾರೆ.. ಇಲ್ಲಿ ಕಮಿಷನರ್ ರನ್ನ ಕೇಳಿದ್ರೆ ಪೊಲೀಸ್ ಮಹಾನಿರ್ದೇಶಕರನ್ನ ಕೇಳಬೇಕು ಅಂತಾರೆ.. ಕರ್ನಾಟಕ ಪೊಲೀಸ್ ಗೆ ಒಳ್ಳೆಯ ಇತಿಹಾಸ ಇದೆ. ಆದರೆ ಇಂತಹ ಅಸಮರ್ಥ ಕಮಿಷನರ್ ರನ್ನ ನಾನು ಎಲ್ಲೂ ನೋಡಿಲ್ಲ. ಇವರು ರಾಜಕೀಯ ಮಾಡ್ತಾ ಇದ್ದಾರೆ. ಈ ರೀತಿ ಮಾಡೋದಾದರೆ ಖಾಕಿ ಬಿಚ್ಚಿಟ್ಟು ರಾಜಕೀಯ ಮಾಡಲಿ ಎಂದು ಅಸಮಾಧಾನ ಹೊರಹಾಕಿದ್ರು.








