ನವದೆಹಲಿ: ಸೌರವ್ ಗಂಗೂಲಿ ಮತ್ತು ಎಂ.ಎಸ್. ಧೋನಿ ರೀತಿಯಲ್ಲಿ ದೀರ್ಘಾವಧಿವರೆಗೆ ಭಾರತ ಕ್ರಿಕೆಟ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸುವ ಅವಕಾಶ ಕುಂಬ್ಳೆಗೆ ದೊರೆತಿದ್ದರೆ, ಇನ್ನೂ ಹಲವು ದಾಖಲೆಗಳು ನಿರ್ಮಾಣವಾಗಿರುತ್ತಿದ್ದವು ಎಂದು ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ಸ್ಪೋರ್ಟ್ಸ್ ತಕ್ ಎಂಬ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗೌತಮ್ ಗಂಭೀರ್, ಅನಿಲ್ ಕುಂಬ್ಳೆ ಅವರನ್ನು ಕೊಂಡಾಡಿದ್ದಾರೆ. ಅನಿಲ್ ಕುಂಬ್ಳೆ ಕೇವಲ 14 ಟೆಸ್ಟ್ ಪಂದ್ಯಗಳಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇವರು ನಾಯಕರಾಗಿದ್ದ ಸಂದರ್ಭದಲ್ಲೇ ಆಸ್ಟ್ರೇಲಿಯಾದಲ್ಲಿ ಹರ್ಭಜನ್ ಸಿಂಗ್ ಮತ್ತು ಆಂಡ್ರ‍್ಯೂ ಸೈಮಂಡ್ಸ್ ನಡುವಿನ ಮಂಕಿಗೇಟ್ ವಿವಾದ ಸೃಷ್ಟಿಯಾಗಿತ್ತು. ಈ ಸಂದರ್ಭವನ್ನು ನಿರ್ವಹಿಸುವಲ್ಲಿ ಅನಿಲ್ ಕುಂಬ್ಳೆ ರಾಜತಾಂತ್ರಿಕ ನೈಪುಣ್ಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದು ಅನಿಲ್ ಕುಂಬ್ಳೆ ಅವರ ನಾಯಕತ್ವದ ಗುಣವನ್ನು ಮೆಚ್ಚಿಕೊಂಡು ಹೊಗಳಿದ್ದಾರೆ ಗೌತಿ.
2008ರ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ನಾನು ಮತ್ತು ವೀರೇಂದ್ರ ಸೆಹ್ವಾಗ್ ರಾತ್ರಿ ಭೋಜನ ಮಾಡುತ್ತಿದ್ದೆವು. ಈ ವೇಳೆ ಅಲ್ಲಿಗೆ ಬಂದ ಅನಿಲ್ ಕುಂಬ್ಳೆ, 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ನಾಲ್ಕೂ ಪಂದ್ಯಗಳಲ್ಲಿ ನೀವಿಬ್ಬರೂ ಆರಂಭಿಕರಾಗಿ ಕಣಕ್ಕಿಳಿಯುತ್ತೀರಿ. ನೀವು 8 ಇನಿಂಗ್ಸ್ ಗಳಲ್ಲೂ ಶೂನ್ಯ ಸಾಧನೆ ಮಾಡಿದರೂ ತೊಂದರೆ ಇಲ್ಲ ಎಂದು ಹೇಳಿದರು. ಇದನ್ನು ಕೇಳಿಸಿಕೊಂಡ ನಂತರದಲ್ಲಿ ನಾನು ಯಾರಿಗೂ ಪ್ರಾಣವನ್ನು ಬೇಕಾದರೂ ಕೊಡಬೇಕೆಂದರೆ ಅದು ಅನಿಲ್ ಕುಂಬ್ಳೆ ಮಾತ್ರ ಎಂದು ತೀರ್ಮಾನಿಸಿದೆ ಎಂದು ಗೌತಿ ವಿವರಿಸಿದ್ದಾರೆ.
ಆ ಸರಣಿಯಲ್ಲಿ ಗೌತಮ್ ಗಂಭೀರ್ ದ್ವಿಶತಕ ಸಾಧನೆಯ ಜತೆಗೆ ಉತ್ತಮ ಪ್ರದರ್ಶನ ತೋರಿದರು. ತಮ್ಮ ಈ ಎಲ್ಲ ಸಾಧನೆಯ ಶ್ರೇಯ ಅನಿಲ್ ಕುಂಬ್ಳೆ ಅವರಿಗೆ ಸಲ್ಲತಕ್ಕದ್ದು ಎಂದು ಗಂಭೀರ್ ಹೇಳಿದ್ದಾರೆ.







