ವಿಜಯ್ ಭಾರದ್ವಾಜ್… ಕರ್ನಾಟಕದ ಪ್ರತಿಭಾನ್ವಿತ ಆಲ್ ರೌಂಡರ್. ಆಡಿರುವುದು ಸುಮಾರು ಹತ್ತು ವರ್ಷಗಳಾದ್ರೂ ಮಾಡಿರುವ ಸಾಧನೆ ಅಷ್ಟಿಷ್ಟಲ್ಲ. 1993-94ರಲ್ಲಿ ರಣಜಿ ಟೂರ್ನಿಗೆ ಪದಾರ್ಪಣೆ ಮಾಡಿರುವ ವಿಜಿ, ದೇಸಿ ಕ್ರಿಕೆಟ್ನಲ್ಲಿ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚು ಹರಿಸಿದ್ದರು. ಅಲ್ಲದೆ ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆದುಕೊಳ್ಳಲು ಯಶಸ್ವಿಯಾದ್ರು. ಚೊಚ್ಚಲ ಏಕದಿನ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವಿಜಯ್ ಅವರು ಸಾಕಷ್ಟು ಭರವಸೆ ಮೂಡಿಸಿದ್ದರು. ಆದ್ರೆ ಬೆನ್ನು ನೋವಿನಿಂದಾಗಿ ಕ್ರಿಕೆಟ್ನಿಂದಲೇ ದೂರ ಸರಿಯಬೇಕಾಯ್ತು.
saakshatv.com ನ ವಿಶೇಷ ಕಾರ್ಯಕ್ರಮ ಸೂಪರ್ ಓವರ್ ನೇರ ಪ್ರಸಾರದಲ್ಲಿ ಮಾತನಾಡಿದ ವಿಜಯ್ ಭಾರದ್ವಾಜ್ ಅವರು ತಮ್ಮ ಕ್ರಿಕೆಟ್ ಬದುಕಿನ ಅನೇಕ ಘಟನೆಗಳನ್ನು ನೆನಪಿಸಿಕೊಂಡ್ರು. ಬೆಂಗಳೂರಿನಲ್ಲಿ ಕ್ರಿಕೆಟ್ ಪವರ್ ಹೌಸ್ ಆಗಿದ್ದ ಬಸವನಗುಡಿಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ತನಕ ಬೆಳೆದು ಬಂದ ಹಾದಿಯನ್ನು ಸಿಂಹಾವಲೋಕನ ಮಾಡಿಕೊಂಡ್ರು. ಜಿ.ಆರ್.ವಿಶ್ವನಾಥ್, ಸದಾನಂದ್ ವಿಶ್ವನಾಥ್, ರಘುರಾಮ್ ಭಟ್, ಸುಧಾಕರ್ ರಾವ್ ಹೀಗೆ ಹಿರಿಯ ಆಟಗಾರರನ್ನು ನೋಡುತ್ತಲೇ ಕ್ರಿಕೆಟ್ ಆಟದತ್ತ ಆಕರ್ಷಿತರಾದ ವಿಜಿ ಅವರು 16 ವಯೋಮಿತಿ ಕ್ರಿಕೆಟ್ ಟೂರ್ನಿಯ ಮೂಲಕ ರಾಜ್ಯ ಕ್ರಿಕೆಟ್ ತಂಡದ ಕದ ತಟ್ಟಲು ಶುರು ಮಾಡಿದ್ದರು. ಆದ್ರೆ ಹಿರಿಯ ಆಟಗಾರರ ಪ್ರಭಾವಳಿಯ ಮುಂದೆ ದೇಸಿ ತಂಡದಲ್ಲಿ ಸ್ಥಾನ ಪಡೆಯಲು ಕೆಲವು ಸಮಯ ಕಾಯಬೇಕಾಯ್ತು.
ಆದ್ರೆ ರಾಜ್ಯ ತಂಡಕ್ಕೆ ಎಂಟ್ರಿಯಾದ ನಂತರ ವಿಜಯ್ ಭಾರದ್ವಾಜ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಮೂರು ರಣಜಿ ಟ್ರೋಫಿ ಗೆದ್ದ ತಂಡದಲ್ಲಿದ್ದ ವಿಜಿ ಅವರು ಆ ದಿನಗಳಲ್ಲಿ ನಡೆದಿರುವಂತಹ ಕೆಲವೊಂದು ಸ್ವಾರಸ್ಯಕರವಾದ ಸನ್ನಿವೇಶಗಳನ್ನು ನೆನಪಿಸಿದ್ರು. ಹೈದ್ರಬಾದ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ದೊಡ್ಡಗಣೇಶ್ ಗೆಲುವಿನ ರೂವಾರಿಯಾಗಿದ್ದು, ನಾಯಕ ರಾಹುಲ್ ದ್ರಾವಿಡ್ ಒತ್ತಡದಲ್ಲಿ ಸಿಲುಕಿದ್ದಾಗ ಬೈದಿರುವುದು, ಸಿರಗುಪ್ಪಿ, ಸುನೀಲ್ ಜೋಷಿ ಔಟಾದಾಗ ರಾಹುಲ್ ದ್ರಾವಿಡ್ ಅವರ ರಿಯಾಕ್ಷನ್ ಹೇಗಿತ್ತು, ತಿಲಕ್ ನಾಯ್ಡು ಬೌಲಿಂಗ್, ಅಪತ್ಬಾಂದವ ಸುನೀಲ್ ಜೋಷಿ ಬ್ಯಾಟ್ ಮತ್ತು ಚೆಂಡಿನಲ್ಲಿ ಹೇಗೆ ತಂಡಕ್ಕೆ ಸಹಕಾರಿಯಾಗುತ್ತಿದ್ದರು ಎಂಬುದನ್ನು ಇದೇ ವೇಳೆ ಹೇಳಿಕೊಂಡ್ರು. ಹಾಗೇ ದೊಡ್ಡ ಗಣೇಶ್ ಮತ್ತು ಸಿದೂ ನಡುವಿನ ಜಟಾಪಟಿಯ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. ನಾನು ಏನು ಗೌತಮ ಬುದ್ದನಲ್ಲ. ಅವನು ಬೈದ್ರೂ ನಾನು ಸುಮ್ಮನಿರಬೇಕಾ… ನಾನು ಅವನಿಗೆ ವಾಪಸ್ ಕೊಟ್ಟೆ ಕೊಡುತ್ತೇನೆ ಎಂದು ಸಿದೂ ಗಣೇಶ್ಗೆ ಹೇಳಿದ್ದರು. ಆದ್ರೆ ಆ ಪಂದ್ಯದಲ್ಲಿ ತನ್ನ ರಿವರ್ಸ್ ಸ್ವಿಂಗ್ ಬೌಲಿಂಗ್ ಮೂಲಕವೇ ಗಣೇಶ್ ಅವರು ಸಿದೂ ಅವರ ಬಾಯಿ ಮುಚ್ಚಿಸಿದ್ರು ಎಂದರು. ಇನ್ನು ಚೊಚ್ಚಲ ರಣಜಿ ತಂಡವನ್ನು ಆಡುವಾಗ ಮತ್ತು ಟೀಮ್ ಇಂಡಿಯಾ ಕ್ಯಾಪ್ ಧರಿಸುವ ಆಗಿರುವ ಸಂಭ್ರಮವನ್ನು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ ಎಂದ್ರು. ಹಾಗೇ ಸಚಿನ್ ತೆಂಡುಲ್ಕರ್ ಮತ್ತು ಸೌರವ್ ಗಂಗೂಲಿ ಸಹ ಆಟಗಾರರನ್ನು ಯಾವ ರೀತಿ ಪ್ರೇರಣೆ ನೀಡುತ್ತಿದ್ದರು ಎಂಬುದನ್ನು ಸಹ ಇದೇ ಉಲ್ಲೇಖಿಸಿದ್ರು. ಅದೂ ಅಲ್ಲದೆ ತನಗೆ ಬೆನ್ನು ನೋವು ಇದ್ದಾಗ ಸೌರವ್ ಗಂಗೂಲಿ ನೀಡಿರುವ ಬೆಂಬಲ, ಅವರು ಹೇಳಿರುವ ಮಾತುಗಳು ಇನ್ನೂ ನನಗೆ ನೆನಪಿನಲ್ಲಿದೆ. ಆದ್ರೆ ನನ್ನ ದುರಾದೃಷ್ಟ ಬೆನ್ನು ನೋವು ನನ್ನ ಕ್ರಿಕೆಟ್ ಬದುಕನ್ನು ಕಿತ್ತುಕೊಂಡಿತ್ತು ಎಂದು ಬೇಸರದಿಂದಲೇ ಹೇಳಿದ್ರು.
ಹಾಗೇ ಧೋನಿಯ ಬಗ್ಗೆ ಮಾತನಾಡಿದ ವಿಜಿ, ಬಿಹಾರ ವಿರುದ್ಧದ ಪಂದ್ಯದಲ್ಲಿ ಧೋನಿ, ಸುನೀಲ್ ಜೋಷಿಗೆ ಬಲಿಯಾಗಿದ್ದರು. ಆಗ ಧೋನಿಯ ಬಗ್ಗೆ ಬಿಹಾರ ತಂಡದಲ್ಲಿದ್ದ ನನ್ನ ಗೆಳೆಯ ಸಾಕಷ್ಟು ಬಿಲ್ಡ್ ಅಪ್ ಕೊಟ್ಟಿದ್ದ. ಸುನೀಲ್ ಜೋಷಿ ಎಸೆತಕ್ಕೆ ಔಟಾದಾಗ ತನ್ನ ಗೆಳೆಯನನ್ನು ನಾನು ಅಣಕಿಸಿದ್ದೆ. ಆದ್ರೆ ಎರಡನೇ ಇನಿಂಗ್ಸ್ ನಲ್ಲಿ ಧೋನಿ ಎಲ್ಲವನ್ನೂ ಉಲ್ಟಾಪಲ್ಟಾ ಮಾಡಿದ್ರು. 40 ಎಸೆತಗಳಲ್ಲಿ ಸುಮಾರು 90 ರನ್ ಸಿಡಿಸಿದ್ರು. ಆಗ ಧೋನಿ ಆಡ್ತಾನೆ ಅಂದಾಗ ಸುಮಾರು ಹತ್ತು ಸಾವಿರ ಜನ ಸೇರುತ್ತಿದ್ದರು. ಆದ್ರೆ ಧೋನಿ ಔಟಾಗುತ್ತಿದ್ದಂತೆ ಎಲ್ಲರೂ ಜಾಗ ಖಾಲಿ ಮಾಡಿದ್ದರು. ಆಗಲೇ ಧೋನಿಯ ಪ್ರತಿಭೆ ಹಾಗೂ ಟೀಮ್ ಇಂಡಿಯಾದಲ್ಲಿ ಮಿಂಚು ಹರಿಸ್ತಾನೆ ಅಂತ ಅಂದುಕೊಂಡಿದ್ದೆ ಎಂದು ಧೋನಿಯ ನಾಯಕತ್ವ, ವ್ಯಕ್ತಿತ್ವವನ್ನು ವಿಜಯ್ ಭಾರದ್ವಾಜ್ ಬಣ್ಣಿಸಿದ್ರು.
ಇನ್ನು ಅನಿಲ್ ಕುಂಬ್ಳೆ.. ಕರ್ನಾಟಕ ಕ್ರಿಕೆಟ್ ತಂಡವನ್ನು 90ರ ದಶಕದಲ್ಲಿ ಉತ್ತುಂಗಕ್ಕೇರಿಸಲು ಅನಿಲ್ ಕುಂಬ್ಳೆಯ ಕಾಣಿಕೆ ಅಪಾರವಾದದ್ದು. ಅನಿಲ್ ಜೊತೆ ಶ್ರೀನಾಥ್, ವೆಂಕಿ, ಸುಜೀತ್, ಜಸ್ವಂತ್, ಅರುಣ್ ಕುಮಾರ್, ಸುನೀಲ್ ಕುಮಾರ್ ಹೀಗೆ ಸಾಲು ಸಾಲು ಯುವ ಆಟಗಾರರ ಪ್ರತಿಭೆ ಅನಾವರಣಗೊಂಡಿತ್ತು. 90ರ ದಶಕದಲ್ಲಿ ಕರ್ನಾಟಕ ತಂಡ ಅಂದ್ರೆ ಅದು ಭಾರತ ತಂಡದಷ್ಟೇ ಬಲಿಷ್ಠವಾಗಿತ್ತು. ಅದ್ರಲ್ಲೂ ಅನಿಲ್ ಕುಂಬ್ಳೆ ಅವರ ನಾಯಕತ್ವದ ಬಗ್ಗೆ ಎರಡು ಮಾತೇ ಇಲ್ಲ. ಕ್ರಿಕೆಟ್ ಮೇಲಿನ ಪ್ರೀತಿ, ಶಿಸ್ತು, ಬದ್ಧತೆ, ತಂಡವನ್ನು ಮುನ್ನಡೆಸುವ ರೀತಿ ಎಲ್ಲವೂ ಕೂಡ ಅನಿಲ್ ಕುಂಬ್ಳೆಯಿಂದ ನೋಡಿ ಕಲಿಯಬೇಕು ಎಂದ್ರು.
ಇದೇ ವೇಳೆ ಕೊರೋನಾ ವೈರಸ್ನಿಂದಾಗಿ ಈಗಾಗಲೇ ಐಪಿಎಲ್ ಟೂರ್ನಿ ನಡೆದಿಲ್ಲ. ಐಪಿಎಲ್ ಟೂರ್ನಿ ನಡೆಯಬೇಕು. ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯೂ ನಡೆಯಬೇಕು. ಮೈದಾನದಲ್ಲಿ ಪ್ರೇಕ್ಷಕರಿಲ್ಲದೆ ಆಟವಾಡಿದ್ರೂ ಪರವಾಗಿಲ್ಲ. ಕ್ರಿಕೆಟ್ ಆಟ ಸೇರಿದಂತೆ ಕ್ರೀಡಾ ಚಟುವಟಿಕೆಗಳು ನಿಧಾನವಾಗಿ ಆರಂಭವಾಗಬೇಕು ಎಂದ್ರು.
ಮತ್ತೊಂದೆಡೆ ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡಿದ ವಿಜಯ್ ಭಾರದ್ವಾಜ್, ವಿರಾಟ್ ಕೊಹ್ಲಿ ಪ್ರತಿಭಾನ್ವಿತ ಆಟಗಾರ. 19 ವಯೋಮಿತಿ ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಹಾಗೂ ಐಪಿಎಲ್ ನಲ್ಲಿ ಆರ್ಸಿಬಿ ಪರ ಆಡುತ್ತಿದ್ದ ಮೊದಲ ಎರಡು ವರ್ಷ ಕ್ರಿಕೆಟ್ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದರು. ಆದ್ರೆ ನಂತರ ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ವಿಶ್ವ ಕ್ರಿಕೆಟ್ ನಲ್ಲಿ ದೈತ್ಯ ಆಟಗಾರನಾಗಿ ರೂಪುಗೊಂಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ವಿರಾಟ್ ಕೊಹ್ಲಿ ಮನುಷ್ಯನಾ…. ಅಬ್ಬಾ ಅದು ವಿರಾಟ ದರ್ಶನ ಎಂದು ಬಣ್ಣಿಸಿದ್ರು. ಇದೇ ವೇಳೆ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ ನಡುವೆ ಹೊಂದಾಣಿಕೆ ಮಾಡಲ್ಲ. ಮಾಡುವುದು ಕೂಡ ಸರಿಯಲ್ಲ. ಆದ್ರೆ ಅವರಿಬ್ಬರಲ್ಲಿ ಸಾಕಷ್ಟು ಸಾಮ್ಯತೆಗಳಿವೆ ಎಂದ್ರು. ಗೆಲುವು, ರನ್ ಗಳಿಸಬೇಕು, ಆಡಬೇಕು, ಸವಾಲಿಗೆ ಪ್ರತಿ ಸವಾಲು ಹೀಗೆ ಮೈದಾನದಲ್ಲಿ ರನ್ ಮಳೆಯನ್ನು ಹರಿಸ್ತಾರೆ ಎಂದ್ರು.
ಇನ್ನೊಂದೆಡೆ ಸೆಹ್ವಾಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದ ವಿಜಿ, ಸೆಹ್ವಾಗ್ ಬ್ಯಾಟಿಂಗ್ ನಲ್ಲಿ ತಾಂತ್ರಿಕತೆ ಇಲ್ಲ ಎಂಬುದನ್ನು ಒಪ್ಪಲ್ಲ. ಸೆಹ್ವಾಗ್ ಅವರಲ್ಲಿ ಧೈರ್ಯವಿದೆ. ಟೈಮಿಂಗ್ ಇದೆ. ಚೆಂಡಿನ ಗತಿಯನ್ನು ತಕ್ಷಣವೇ ಅರಿತುಕೊಳ್ಳುತ್ತಾರೆ. ಹಾಗೇ ಯಾರ ಮಾತನ್ನು ಕೇಳುವುದಿಲ್ಲ. ತನ್ನ ಸಾಮಥ್ರ್ಯದ ಮೇಲೆ ಅವರು ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಅದೂ ಅಲ್ಲದೆ ಮಾನಸಿಕವಾಗಿ ಬಹಳ ಗಟ್ಟಿಗ. ಒಂದು ವೇಳೆ ಸೆಹ್ವಾಗ್ ಮನಸ್ಥಿತಿ ನನ್ನಲ್ಲಿ ಇರುತ್ತಿದ್ರೆ ಟೆಸ್ಟ್ ಕ್ರಿಕೆಟ್ ನಲ್ಲಿ ನಾನು 10ಸಾವಿರ ರನ್ ದಾಖಲಿಸುತ್ತಿದೆ ಎಂದ್ರು.
ಒಟ್ಟಿನಲ್ಲಿ ವಿಜಯ್ ಭಾರದ್ವಾಜ್ ತನ್ನ ಕ್ರಿಕೆಟ್ ಬದುಕಿನ ಹಲವಾರು ವಿಚಾರಗಳನ್ನು ಇದೇ ನೆನಪಿಸಿಕೊಂಡ್ರು. ಥ್ಯಾಂಕ್ಯೂ ವಿಜಯ್ ಭಾರದ್ವಾಜ್.








