ಚಾಮರಾಜನಗರ: ಊರಿನ ಹಿರಿಯರು ಸಾಮಾಜಿಕ ಬಹಿಷ್ಕಾರ ಹಾಕಿದ್ದಕ್ಕಾಗಿ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿಯಲ್ಲಿ ನಡೆದಿದೆ. ಶಿವರಾಜು(45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂದಿಸಿದಂತೆ 17 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಹೊಡೆದಿದ್ದ ಕಾರಣಕ್ಕೆ ಶಿವಣ್ಣ ನಾಯ್ಕ ಎಂಬಾತನಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಇದರಿಂದ ಮನನೊಂದು ಶಿವಣ್ಣನಾಯ್ಕ ಆತ್ಮಹತ್ಯೆ ಗೆ ಮುಂದಾಗಿದ್ದ. ಆ ವೇಳೆ ಶಿವಣ್ಣನಾಯ್ಕನನ್ನು ಶಿವರಾಜು ಮನವೊಲಿಸಿ ಸಮಾಧಾನ ಪಡಿಸಲಾಗಿತ್ತು. ಇದರ ನಂತರ ಪ್ರಕರಣದಲ್ಲಿ ನೀನು ಶಾಮೀಲಾಗಿದ್ದೀಯಾ ಎಂದು ಊರಿನ ಮುಖಂಡರು ಸೇರಿ ಶಿವರಾಜುವುಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಅಲ್ಲದೇ, 6 ಸಾವಿರ ರೂ. ದಂಡ ವಿಧಿಸಿದ್ದರು. ಇದರಿಂದ ಮನನೊಂದ ಶಿವರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು 17 ಜನರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.