ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್ ಶರ್ಮಾ ಅವರ ಹತ್ಯೆ ಪೂರ್ವ ನಿರ್ಧರಿತ ಸಂಚಾಗಿದ್ದು, ಅಂಕಿತ್ ಹತ್ಯೆ ಮಾಡಿದ್ದು, ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಕಾರ್ಪೊರೇಟರ್ ತಹಿರ್ ಹುಸೇನ್ ಎಂದು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ನೇರವಾಗಿ ಆರೋಪಿಸಿದ್ದಾರೆ.
ಈಶಾನ್ಯ ದೆಹಲಿಯ ಚಾಂದ್ ಬಾಗ್ ಪ್ರದೇಶದ ಚರಂಡಿಯೊಂದರಲ್ಲಿ ಅಂಕಿತ್ ಶರ್ಮಾ ಅವರ ಮೃತದೇಹ ಅನುಮಾನಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಅಂಕಿತ್ ಶರ್ಮ ಸಾವನ್ನು ಮೇಲ್ನೋಟಕ್ಕೆ ಗಲಭೆಯಲ್ಲಿ ಉಂಟಾದ ಸಾವು ಎಂದು ಬಿಂಬಿಸಲಾಗಿತ್ತು. ಈ ಬಗ್ಗೆ ಅಲ್ಲಗಳೆದಿರುವ ಕಪಿಲ್ ಮಿಶ್ರಾ, ಇದೊಂದು ಪ್ರೀಪ್ಲಾನ್ಡ್ ಮರ್ಡರ್ ಎಂದು ಹೇಳಿದ್ದಾರೆ. ಹತ್ಯೆ ಆರೋಪಿ ತಹಿರ್ ಹುಸೇನ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂದು ಮಿಶ್ರಾ ಆರೋಪಿಸಿದ್ದಾರೆ.

ಎಎಪಿ ಮುಖಂಡ ತಹೀರ್ ಹುಸೇನ್ ಐಬಿ ಅಧಿಕಾರಿ ಅಂಕಿತ್ ಶರ್ಮಾರನ್ನು ಮಾತ್ರವಲ್ಲದೇ ಇತರ ನಾಲ್ವರು ಯುವಕರನ್ನು ಹತ್ಯೆ ಮಾಡಿದ್ದಾನೆ. ಮುಸುಕು ಧರಿಸಿರುವ ಯುವಕರೊಂದಿಗೆ ದೊಣ್ಣೆ, ಕಲ್ಲು, ಬುಲೆಟ್ ಮತ್ತು ಪೆಟ್ರೋಲ್ ಬಾಂಬ್ ಗಳೊಂದಿಗೆ ತಹೀರ್ ಹುಸೇನ್ ಇರುವ ವಿಡಿಯೋ ಇದೆ. ಕೇಜ್ರಿವಾಲ್ ಹಾಗೂ ಎಎಪಿ ಮುಖಂಡರೊಂದಿಗೆ ಹುಸೇನ್ ನಿರಂತರವಾಗಿ ಮಾತನಾಡುತ್ತಿರುತ್ತಾನೆ ಎಂದು ಕಪಿಲ್ ಮಿಶ್ರಾ ಟ್ವೀಟ್ ಮಾಡಿ ಆರೋಪ ಮಾಡಿದ್ದಾರೆ.

ಇನ್ನು, ಚಾಂದ್ ಬಾಗ್ ನಲ್ಲಿ ತಹೀರ್ ಹುಸೇನ್ ಕಟ್ಟಡದಿಂದ ಕೆಲವರು ಕಲ್ಲು ತೂರಾಟ ನಡೆಸಿದ್ದರು
ಎಂದು ಅಂಕಿತ್ ಕುಟುಂಬಸ್ಥರು ನಿನ್ನೆ ಆರೋಪ ಮಾಡಿದ್ದಾರೆ. ಅಂಕತ್ ಶರ್ಮ ಕೊಲೆ ಸಂಬಂಧ ಮಾತನಾಡಿರುವ ಅವರ ತಂದೆ ರವೀಂದರ್ ಕುಮಾರ್, ಕರ್ತವ್ಯ ಮುಗಿಸಿ ವಾಪಾಸ್ ಆಗುತ್ತಿದ್ದಾಗ ಅಂಕಿತ್ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು, ಅಂಕಿತ್ ಹತ್ಯೆಗೆ ಎಎಪಿ ಕಾರ್ಪೊರೇಟರ್ ತಹೀರ್ ಹುಸೇನ್ ಕಾರಣ ಎಂಬ ಬಿಜೆಪಿ ಮುಖಂಡ ಕಪಿಲ್ ಶರ್ಮಾ ಆರೋಪಕ್ಕೆ ಎಎಪಿ ಪಾರ್ಟಿಯ ಯಾರೊಬ್ಬರು ಈವರೆಗೂ ತುಟಿಬಿಚ್ಚದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.








