ನವದೆಹಲಿ : ಕರ್ನಾಟಕದ ಸಿಂಗಂ ಎಂದೇ ಪ್ರಸಿದ್ದರಾಗಿದ್ದ ಕೆ.ಅಣ್ಣಾಮಲೈ ಅವರು ಭಾರತೀಯ ಜನತಾ ಪಾರ್ಟಿ ಸೇರುವುದು ಖಚಿತವಾಗಿದೆ.
ತಮಿಳುನಾಡಿನ ಕರೂರು ಮೂಲದವರಾದ ಕೆ ಅಣ್ಣಾಮಲೈ ಅವರು ಐಪಿಎಸ್ ಅಧಿಕಾರಿಯಾಗಿ ಕಾರ್ಕಳದಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಆರಂಭಿಸಿ, ನಂತರ ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರು ದಕ್ಷಿಣದಲ್ಲಿ ಸೇವೆ ಸಲ್ಲಿಸಿದ್ದರು. 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸ್ವಂತ ಊರಲ್ಲೇ ಇದ್ದು 2021ರ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಾಗಿ ತಿಳಿಸಿದ್ದರು.
ಈ ಮೊದಲು ಅಣ್ಣಾಮಲೈ ಅವರು ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಪಕ್ಷಕ್ಕೆ ಸೇರುತ್ತಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು. ಈಗ ಈ ಸುದ್ದಿಗೆ ಬ್ರೇಕ್ ಹಾಕಿ ಕೇಸರಿ ಪಡೆಗೆ ಸೇರೋದು ಪಕ್ಕಾ ಆಗಿದೆ. ಈ ಬಗ್ಗೆ ಮಾತನಾಡಿರುವ ಅಣ್ಣಾಮಲೈ, ನನ್ನ ಪ್ರಕಾರ ಐಪಿಎಸ್ ಎಂದರೆ ದೇಶ, ರಾಷ್ಟ್ರೀಯ ಭದ್ರತೆ. ನಾನು ಅಧಿಕಾರಿಯಾಗಿದ್ದೆ. ಅದೇ ನಿಟ್ಟಿನಲ್ಲಿ ತಮಿಳುನಾಡಿಗೆ ಈಗ ಪರ್ಯಾಯ ಆಡಳಿತದ ಅಗತ್ಯವಿದೆ. ಆ ಮಾರ್ಗವನ್ನು ಬಿಜೆಪಿ ಒದಗಿಸಬಹುದೆಂದು ನಾನು ಭಾವಿಸುತ್ತೇನೆ. ಹೀಗಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯವಾದಿ ಪಕ್ಷ. ನಾನು ರಾಷ್ಟ್ರೀಯ ವಿಚಾರ ಹೊಂದಿರುವ ವ್ಯಕ್ತಿ. ಹೀಗಾಗಿ ನಾನು ಬೇಷರತ್ತಾಗಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದು, ನರೇಂದ್ರ ಮೊದಿ ಅವರ ಬಗ್ಗೆ ಇರುವ ಮೆಚ್ಚುಗೆಯೇ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯಿತು ಎಂದಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿಯನ್ನು ತಪ್ಪಾಗಿ ಗ್ರಹಿಸಿದ್ದಾರೆ. ಬಿಜೆಪಿ ಪಕ್ಷದ ಕುರಿತು ಇತರ ರಾಜ್ಯಗಳಲ್ಲಿ ಇರುವ ರೀತಿಯಲ್ಲಿ ಇಲ್ಲಿ ಗ್ರಹಿಸಲ್ಪಟ್ಟಿಲ್ಲ. ಬಿಜೆಪಿಯ ಬಗ್ಗೆ ತಪ್ಪು ಗ್ರಹಿಕೆ ಇಲ್ಲಿ ಸೃಷ್ಟಿಸಲಾಗಿದೆ ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಕೇಸರಿ ಬಾವುಟ ಹಿಡಿಯಲು ಹೊರಟಿರುವ ಅಣ್ಣಾಮಲೈ ಅವರಿಗೆ ತಮಿಳುನಾಡಿನಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ. ಮುಂದಿನ ವರ್ಷದ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಬಿಜೆಪಿಯು ದಕ್ಷಿಣದ ರಾಜ್ಯದತ್ತ ಚಿತ್ತ ಹರಿಸಿದೆ.









