ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಜೈಲಿನಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಕೋರ್ಟ್‌ನಿಂದ ಮತ್ತೊಂದು ದೊಡ್ಡ ಆಘಾತ ತಗುಲಿದೆ. ಪ್ರಕರಣದ ತನಿಖೆ ಸಂದರ್ಭದಲ್ಲಿ ಪೊಲೀಸರು ದರ್ಶನ್ ಹಾಗೂ ಇತರೆ ಆರೋಪಿಗಳಿಂದ ಒಟ್ಟು 82 ಲಕ್ಷ ರೂ. ನಗದನ್ನು ವಶಪಡಿಸಿದ್ದರು. ಈ ಹಣ ತನಿಖೆಗೆ ಸಂಬಂಧಿಸದ್ದು, ತನ್ನ ವೈಯಕ್ತಿಕ ಹಣವಾಗಿದ್ದು, ತನಿಖೆ ಮುಗಿದಿರುವ ಕಾರಣ ಇದೀಗ ಹಣವನ್ನು ವಾಪಸ್ ನೀಡಬೇಕು ಎಂದು ದರ್ಶನ್, ಬೆಂಗಳೂರಿನ 57ನೇ CCH ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಆದರೆ, ದರ್ಶನ್‌ನ ಮನವಿಗೆ ಆದಾಯ ತೆರಿಗೆ ಇಲಾಖೆ ತೀವ್ರ ಆಕ್ಷೇಪಣೆ ಸಲ್ಲಿಸಿತ್ತು. ಆ ಹಣದ ಮೂಲದ ಕುರಿತು ಸ್ಪಷ್ಟತೆ ಇಲ್ಲದ ಕಾರಣ ಹಾಗೂ ಹಣದ ಮೇಲೆ IT ತನಿಖೆ ಅಗತ್ಯವಿದೆ ಎಂದು ಇಲಾಖೆ ಕೋರ್ಟ್‌ಗೆ ತಿಳಿಸಿತ್ತು.
ಎರಡೂ ಕಡೆಗಳ ವಾದಗಳನ್ನು ಪರಿಶೀಲಿಸಿದ ಕೋರ್ಟ್, ಆದಾಯ ತೆರಿಗೆ ಇಲಾಖೆಯ ಅರ್ಜಿಯನ್ನು ಅಂಗೀಕರಿಸಿ, ವಶಪಡಿಸಿಕೊಂಡಿರುವ 82 ಲಕ್ಷ ರೂ. ಹಣವನ್ನು ತನಿಖೆ ಮುಂದುವರಿಸಲು IT ಇಲಾಖೆಯ ವಶಕ್ಕೆ ನೀಡಲು ಆದೇಶ ಹೊರಡಿಸಿದೆ.
ಈ ನಿರ್ಧಾರದಿಂದ ದರ್ಶನ್‌ಗೆ ಕಾನೂನು ಹೋರಾಟದಲ್ಲಿ ಮತ್ತೊಂದು ಹೊಸ ತಿರುವು ದೊರೆತಿದ್ದು, ಈಗ ಈ ಹಣದ ಮೂಲ, ತೆರಿಗೆ ಪಾವತಿ, ದಾಖಲೆಗಳ ಕುರಿತು IT ಇಲಾಖೆಯ ತನಿಖೆ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆ ಉಂಟಾಗಿದೆ.








