ಬೆಂಗಳೂರು: ವಿಜ್ಞಾನಿ ಎಂದು ನಂಬಿಸಿ ಸಾರ್ವಜನಿಕರನ್ನ ವಂಚಿಸಿರುವ ಆರೋಪ ಮೇರೆಗೆ ಡ್ರೋನ್ ಪ್ರತಾಪ್ ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ದೂರು ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದ ಚಾಮರಾಜಪೇಟೆಯ ನಿವಾಸಿ ವಕೀಲರಾದ ಕೆ.ವಿ ಪ್ರವೀಣ್ ದೂರು ನೀಡಿದ್ದಾರೆ. ಡ್ರೋನ್ ಪ್ರತಾಪ್ ಸಂಶೋಧನೆ ಹೆಸರಲ್ಲಿ ವಂಚನೆ ಮಾಡಿದ್ದಾನೆ. ಅಂತಾರಾಷ್ಟ್ರೀಯ ಸ್ಪರ್ಧೆ, ಪ್ರದರ್ಶನದಲ್ಲಿ ಭಾಗಿಯಾಗಿ ಬಹುಮಾನ ಪಡೆದಿರುವುದಾಗಿ ದೇಶದ ಹೆಸರು ಬಳಸಿಕೊಂಡು ದ್ರೋಹ ಮಾಡಿದ್ದಾನೆ. ಹೀಗಾಗಿ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ 2 ಪುಟಗಳ ದೂರು ಸಲ್ಲಿಸಿದ್ದಾರೆ.


ಕಡು ಬಡತನದಲ್ಲಿ ಹುಟ್ಟಿ ಬಂದು ಕಷ್ಟಪಟ್ಟು ಮೇಲೆ ಬಂದಿರುವುದಾಗಿ ಹೇಳಿಕೊಳ್ಳುತ್ತಾ, ಡ್ರೋನ್ ಸಂಶೋಧನೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಪ್ರಪಂಚದ 87 ರಾಷ್ಟ್ರಗಳಲ್ಲಿ ಆಫರ್ ದೊರೆತಿರುವುದಾಗಿ ಹೇಳಿಕೊಳ್ಳುವ ಮೂಲಕ ಭಾರತೀಯರ ನಂಬಿಕೆಗೆ ಮೋಸ ಮಾಡಿದ್ದಾನೆ. ಈ ಮೂಲಕ ದೇಣಿಗೆ, ಬಿರುದು, ಸನ್ಮಾನಗಳನ್ನು ಸಾರ್ವಜನಿಕವಾಗಿ ಪಡೆದು ವಂಚಿಸಿದ್ದಾನೆ. ಇವನ ಸಂಚಿನ ಕೃತ್ಯವು ದೇಶಾದ್ಯಂತ ಪ್ರಸರಿಸಿದ್ದು, ಸೂಕ್ತ ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.








