ನವದೆಹಲಿ: ಪದೇ ಪದೆ ಲಡಾಕ್ ಹಾಗೂ ಅರುಣಾಚಲ ಪ್ರದೇಶ ಗಡಿಂದಲ್ಲಿ ಗಡಿ ಖ್ಯಾತೆ ತೆಗೆಯುತ್ತಾ ಬಂದಿರುವ ಚೀನಾ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ 2ನೇ ಶಾಕ್ ಕೊಟ್ಟಿದ್ದಾರೆ.
ಕಳೆದ ಜೂನ್ 30ರಂದು ಚೀನಾ ಮೂಲದ ಟಿಕ್‍ಟಾಕ್, ಶೇರ್ ಇಟ್ ಸೇರಿದಂತೆ 59 ಆಪ್‍ಗಳನ್ನು ಬ್ಯಾನ್ ಮಾಡಲಾಗಿತ್ತು. ಇಂದು ಮತ್ತೆ ಚೀನಾದ 47 ಆಪ್‍ಗಳನ್ನು ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಆಪ್‍ಗಳನ್ನು ಕಿತ್ತು ಹಾಕುವಂತೆ ಗೂಗಲ್ ಹಾಗೂ ಆಪಲ್ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ.
ಚೀನಾದ ಪಬ್‍ಜಿ, ಟಿಕ್‍ಟಾಕ್ ಲೈಟ್, ಶೇರ್‍ಇಟ್ ಲೈಟ್, ಬಿಗೋ ಲೈವ್ ಲೈಟ್, ವಿಎಫ್‍ವೈ ಲೈಟ್ ಸೇರಿದಂತೆ 47 ಆಪ್‍ಗಳನ್ನು ಬ್ಯಾನ್ ಮಾಡಲಾಗಿದೆ.
ಜೂನ್ 30ರಂದು ಚೀನಾದ ಪ್ರಮುಖ ಆಪ್‍ಗಳಾದ ಟಿಕ್‍ಟಾಕ್, ಶೇರ್‍ಇಟ್, ಹೆಲೋ, ಲೀಕಿ, ಯುಸಿ ಬ್ರೌಸರ್, ವಿಚಾಟ್ ಸೇರಿದಂತೆ 59 ಆಪ್‍ಗಳನ್ನು ನಿಷೇಧ ಮಾಡಲಾಗಿತ್ತು. ಇಂದು ಹಿಂದೆ ಬ್ಯಾನ್ ಮಾಡಲಾದ ಆಪ್‍ಗಳ ಲೈಟ್ ವರ್ಶನ್ ಆಪ್‍ಗಳನ್ನು ನಿಷೇಧ ಮಾಡಲಾಗಿದೆ.
ರಾಷ್ಟ್ರದ ಭದ್ರತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದ ಕಾರಣದಿಂದ ಇನ್ನಷ್ಟು ಚೀನಾ ಆಪ್‍ಗಳನ್ನು ಬ್ಯಾನ್ ಮಾಡಲಾಗಿದೆ. ಇದರೊಂದಿಗೆ ಭಾರತದಲ್ಲಿ ಬ್ಯಾನ್ ಆದ ಚೀನಾ ಆಪ್‍ಗಳ ಸಂಖ್ಯೆ 106ಕ್ಕೆ ಏರಿಕೆಯಾಗಿದೆ.
ಜೂನ್ 15ರಂದು ಲಡಾಕ್‍ನ ಗಾಲ್ವನ್ ಕಣಿವೆಯಲ್ಲಿ ಭಾರತದ ಗಡಿ ಅತಿಕ್ರಮಿಸಿ ಕೊಂಡಿದ್ದ ಚೀನಾ, ಭಾರತೀಯ ಸೇನೆಯ 20 ಯೋಧರನ್ನು ಬಲಿ ಪಡೆದಿತ್ತು.
ಚೀನಾದ ದುರಾಕ್ರಮಣ ಖಂಡಿಸಿ 59 ಆಪ್‍ಗಳನ್ನು ಬ್ಯಾನ್ ಮಾಡುವ ಮೂಲಕ ಮೊದಲ ಶಾಕ್ ಕೊಟ್ಟಿತ್ತು. ಇಂದು ಮತ್ತೆ 47 ಆಪ್‍ಗಳನ್ನು ನಿಷೇಧ ಮಾಡುವ ಮೂಲಕ ಗಡಿತಂಟೆ ಕೆದಕುತ್ತಿರುವ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಶಾಕ್ ಕೊಟ್ಟಿದ್ದಾರೆ.









