ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಜಾಲದ ನಂಟು ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಡ್ರಗ್ಸ್ ಜಾಲವನ್ನು ಸಿಸಿಬಿ ಪೊಲೀಸರ ತಂಡ ಬಯಲಿಗೆ ಎಳೆದಿದೆ.
ಡ್ರಗ್ಸ್ ಜಾಲದ ನಂಟಿನ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಕೇರಳ ಮೂಲದ ಮೂವರು ಟೆಕ್ಕಿಗಳನ್ನು ಬಂಧಿಸಿದೆ. ಸುಬ್ರಮಣಿ, ವಿದುಶ್, ಶೆಜಿನ್ ಬಂಧಿತ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳು.
ಬಂಧಿತರಿಂದ 2 ಕೆ.ಜಿ ಗಾಂಜಾ ಹಾಗೂ 44 ಲಕ್ಷ ಮೌಲ್ಯದ 2161 ಗ್ರಾಂ ಹ್ಯಾಶಿಶ್ ಆಯಿಲ್ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತ ಮೂವರು ಆರೋಪಿಗಳು ಕೇರಳದವರು. ಲಂಡನ್‍ನಲ್ಲಿ ಕಂಪ್ಯೂಟರ್ ಸೈನ್ಸ್, ಇಂಟರ್‍ನೆಟ್ ಅಪ್ಲಿಕೇಶನ್ ಓದಿ ಭಾರತಕ್ಕೆ ವಾಪಸ್ಸಾಗಿದ್ದಾರು.
ಕೇರಳಕ್ಕೆ ವಾಪಸ್ ಆದ ಮೇಲೆ ಬೆಂಗಳೂರಿನಲ್ಲಿ ನೆಲೆಸಿದ ಮೂವರು ಯುವಕರು, ಆಂಧ್ರ ವೈಜಾಗ್‍ನಿಂದ ಡ್ರಗ್ಸ್ ಪೆಡ್ಲರ್‍ಗಳಿಂದ ಗಾಂಜಾ, ಡ್ರಗ್ಸ್, ಹ್ಯಾಶಿಶ್ ತರಿಸಿಕೊಂಡು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಡ್ರಗ್ಸ್ ಮಾರಾಟದಿಂದ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಕಮಲ್‍ಪಂತ್ ಹೇಳಿದ್ದಾರೆ.
ನಮ್ಮ ಸಿಸಿಬಿ ಪೊಲೀಸರ ತಂಡ ಆರೋಪಿಗಳನ್ನು ಸೆರೆ ಹಿಡಿಯುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿಸಿಬಿ ತಂಡಕ್ಕೆ 50 ಸಾವಿರ ಬಹುಮಾನ ಘೋಷಿಸುವುದಾಗಿ ಪ್ರಕಟಿಸಿದರು.