ಕರ್ನಾಟಕ ಸರ್ಕಾರ ತನ್ನ ಹೊಸ ನಿರ್ಧಾರದಿಂದ ರಾಜ್ಯದ ಜನತೆಗೆ ಮತ್ತೊಂದು ಆರ್ಥಿಕ ಹೊಡೆತ ನೀಡಿದೆ. ಸರ್ಕಾರ ಡೀಸೆಲ್ ಮೇಲಿನ ತೆರಿಗೆಯನ್ನು ಶೇಕಡಾ 2.73ರಷ್ಟು ಹೆಚ್ಚಳ ಮಾಡಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ. ಈ ಮೂಲಕ ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು ₹2 ಹೆಚ್ಚಿಸಲಾಗಿದೆ.
ಹಾಲು, ವಿದ್ಯುತ್ ಬಳಿಕ ಡೀಸೆಲ್ ಶಾಕ್:
ಈ ಹಿಂದೆ ರಾಜ್ಯದ ಗ್ಯಾರಂಟಿ ಸರ್ಕಾರ ಹಾಲು ಮತ್ತು ವಿದ್ಯುತ್ ದರ ಹೆಚ್ಚಳ ಮಾಡಿ ಸಾರ್ವಜನಿಕರಿಗೆ ಆರ್ಥಿಕ ಒತ್ತಡವನ್ನುಂಟು ಮಾಡಿತ್ತು. ಇದೀಗ, ಡೀಸೆಲ್ ಮೇಲಿನ ತೆರಿಗೆಯ ಹೆಚ್ಚಳವು ಈ ಸರಣಿಯನ್ನು ಮುಂದುವರಿಸಿದೆ. ಈ ಕ್ರಮದಿಂದ ಸಂಚಾರ ವೆಚ್ಚ ಹೆಚ್ಚಾಗಲಿದ್ದು, ಸಾರಿಗೆ, ವಾಣಿಜ್ಯ ಮತ್ತು ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಈಗಾಗಲೇ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ಈ ತೆರಿಗೆ ಹೆಚ್ಚಳವು ತಕ್ಷಣದಿಂದಲೇ ಜಾರಿಗೆ ಬರುತ್ತದೆ. ಹೀಗಾಗಿ, ಡೀಸೆಲ್ ಮೇಲಿನ ತೆರಿಗೆ ಶೇಕಡಾ 18.44ರಿಂದ 21.17ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪ್ರಸ್ತುತ ಡೀಸೆಲ್ ದರ:
ಈ ತೆರಿಗೆ ಹೆಚ್ಚಳದ ಬಳಿಕ, ಬೆಂಗಳೂರು ನಗರದಲ್ಲಿ ಡೀಸೆಲ್ ಪ್ರತಿ ಲೀಟರ್ ₹88.99ಕ್ಕೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯ ಸಾಧ್ಯತೆ ಇರುವುದರಿಂದ ಸಾರಿಗೆ ಸಂಸ್ಥೆಗಳು ಮತ್ತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಈ ನಿರ್ಧಾರಕ್ಕೆ ರಾಜ್ಯದ ಜನತೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬದುಕು ದುಬಾರಿ ಆಗಿರುವ ಹಿನ್ನಲೆಯಲ್ಲಿ ಇಂತಹ ನಿರ್ಧಾರಗಳು ಜನಸಾಮಾನ್ಯರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಉಂಟು ಮಾಡಲಿದೆ ಎಂಬುದಾಗಿ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್ಚಿನವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದರಿಂದಾಗಿ, ಸಾರಿಗೆ ದರ, ವಸ್ತುಗಳ ಬೆಲೆ ಮತ್ತು ದಿನನಿತ್ಯದ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ಜನರ ಆಕ್ರೋಶದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕು.








