ಬೆಂಗಳೂರು: ಸೂರ್ಯಯಾನದ ಹಿನ್ನೆಲೆಯಲ್ಲಿ ಆದಿತ್ಯ ಎಲ್-1 (Aditya L1) ಬಾಹ್ಯಾಕಾಶ ನೌಕೆಯನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ (Satish Dhawan Space Centre) ಆದಿತ್ಯ L1 ಹೊತ್ತ ಪಿಎಸ್ಎಲ್ವಿ ರಾಕೆಟ್ನ (PSLV-XLC57) ಉಡಾವಣೆಯಾಗಿದೆ. ಈ ಮೂಲಕ ಭಾರತವು ಬಾಹ್ಯಕಾಶ ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದಂತಾಯಿತು. ಆನ್ಲೈನ್ ನೇರ ಪ್ರಸಾರದ ಮೂಲಕ ಕೋಟ್ಯಂತರ ಜನರು ಇದನ್ನು ವೀಕ್ಷಣೆ ಮಾಡಿದ್ದಾರೆ.
ಆದಿತ್ಯ L1 ಎಕ್ಸ್ಎಲ್ ಆವೃತ್ತಿಯ ಪಿಎಸ್ಎಲ್ವಿ ರಾಕೆಟ್ನ ಸಹಾಯದಿಂದ ಗಮ್ಯಸ್ಥಾನಕ್ಕೆ ಪಯಣಿಸುತ್ತಿದ್ದು, ಸೂರ್ಯನ ಕುರಿತ ಅಧ್ಯಯನಕ್ಕೆ ಇಸ್ರೋ ವಿಜ್ಞಾನಿಗಳಿಗೆ ಇದು ಸಹಕಾರವಾಗಲಿದೆ. ಭೂಮಿಯಿಂದ 15 ಲಕ್ಷ ಕಿಮೀ ದೂರದಲ್ಲಿರುವ (930,000 ಮೈಲುಗಳು) ಲ್ಯಾಗ್ರೇಂಜ್ ಪಾಯಿಂಟ್-1 ರಲ್ಲಿ ಬಾಹ್ಯಾಕಾಶ ನೌಕೆ ಇರಿಸಲಾಗುತ್ತದೆ. ಇಲ್ಲಿಂದ ಸೂರ್ಯನ ಮೇಲೆ ಕಣ್ಣಿಡಲು ಸಾಧ್ಯವಾಗಲಿದೆ.