ಬೆಂಗಳೂರು: ಇತ್ತೀಚಿನ ಕೆಲವು ದಿನಗಳಲ್ಲಿ ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ದೊಡ್ಡ ಸದ್ದು ಮಾಡುತ್ತಿವೆ. ಬಳ್ಳಾರಿ, ರಾಯಚೂರು, ಬೆಳಗಾವಿಯಲ್ಲಿ ಬಾಣಂತಿಯರ ಸಾವಿಗೆ ದೊಡ್ಡ ಆಕ್ರೋಶ ಎದುರಾಗಿತ್ತು. ಈಗ ಬೆಂಗಳೂರಿನಲ್ಲೂ ಈ ಘಟನೆ ಬೆಳಕಿಗೆ ಬಂದಿದೆ.
ಇಲ್ಲಿಯ ನಾಗರಬಾವಿಯ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಅನುಷಾ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಒಂದು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದ ಅನುಷಾ, ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೂಲತಃ ಕಡೂರು ತಾಲೂಕಿನ ಗರ್ಜೆ ಗ್ರಾಮದ ನಿವಾಸಿ ಅನುಷಾ ಅವರಿಗೆ ತರೀಕೆರೆಯ ರಾಜ್ ನರ್ಸಿಂಗ್ ಹೋಂನಲ್ಲಿ ನಾರ್ಮಲ್ ಡಿಲೆವರಿಯಾಗಿತ್ತು. ಡೆಲಿವರಿಗೂ ಮುನ್ನ ಸ್ಕ್ಯಾನಿಂಗ್ ಮಾಡಿದಾಗ ಕಲ್ಲು ಇದೆ ಎಂದು ವೈದ್ಯರು ತಿಳಿಸಿದ್ದರು. ಅದೇ ಸ್ಕ್ಯಾನಿಂಗ್ ವರದಿ ಆಧಾರದ ಮೇಲೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಡೆಲಿವರಿಯಾದ ಒಂದೇ ತಿಂಗಳಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಅನುಷಾಗೆ ಆಪರೇಷನ್ ಮಾಡಲಾಗಿತ್ತು. ವೈದ್ಯರು ಅಲ್ಲಿಯೂ ಯಡವಟ್ಟು ಮಾಡಿದ್ದಾರೆಂದು ಕುಟುಂಬದವರು ಆರೋಪ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಕರುಳಿಗೆ ಹಾನಿಯಾಗಿತ್ತು, ಆದರೆ, ಆ ವಿಚಾರವನ್ನು ವೈದ್ಯರು ಮುಚ್ಚಿಟ್ಟಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಶಸ್ತ್ರಚಿಕಿತ್ಸೆ ಆದ ನಂತರ ಮನೆಗೆ ತೆರಳಿದಾಗ ಬಾಣಂತಿಯ ಕೈ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು. ಹೀಗಾಗಿ ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಶೀಲಿಸಿದ ವೈದ್ಯರು, ಆರೋಗ್ಯ ಸಹಜವಾಗಿದೆ. ಏನೂ ಸಮಸ್ಯೆ ಇಲ್ಲ ಎಂದಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಹೀಗಾಗಿ ಕುಟುಂಸ್ಥರು ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಂಗಳೂರಿಗೆ ಕರೆತಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.