ಮಟಮಟ ಮಧ್ಯಾಹ್ನದ ಸಮಯ. ಅಮರಾವತಿಯ ಇಂದ್ರಭವನದಲ್ಲಿ ತನ್ನ ಭವ್ಯವಾದ 40*40 ಮಾಸ್ಟರ್ ಬೆಡ್ ರೂಂನಲ್ಲಿ ರೆಸ್ಟ್ ನಲ್ಲಿರುವ ಇಂದ್ರದೇವ. ಹೊರಗಡೆ ಗದ್ದಲದ ಸದ್ದು ಕೇಳಿ ಎಚ್ಚೆತ್ತುಕೊಳ್ಳುತ್ತಾನೆ. ಅದೇ ವೇಳೆ ಅಲ್ಲಿಗೆ ಶಚೀ ದೇವಿಯೂ ಮಧ್ಯಾಹ್ನದ ಕೆಲಸ ಮುಗಿಸಿ ಬರುತ್ತಾಳೆ.
ಇಂದ್ರ: “ಪ್ರಿಯೇ, ಅದೇನದು ಹೊರಗಡೆ ಸಿಕ್ಕಾಪಟ್ಟೆ ನಾಯ್ಸ್ ಪೊಲ್ಯೂಷನ್? ಯಾರದು ಗಲಾಟೆ ಮಾಡ್ತಿರೋದು? ನಮ್ ಸೆಕ್ಯೂರಿಟಿಯವರೇನು ಮಾಡ್ತಿದ್ದಾರೆ?
ಶಚಿದೇವಿ: ಗಂಧರ್ವರು, ಕಿನ್ನರರು, ಕಿಂಪುರುಷರು ನಮ್ ಇಂದ್ರಭವನ ಬಂಗ್ಲೋ ಮುಂದೆ ಪ್ರೊಟೆಸ್ಟ್ ಮಾಡ್ತಿದ್ದಾರೆ ಡಿಯರ್”
ಇಂದ್ರ: “ಈಸ್ ಇಟ್! ಬಟ್ ವೈ? ಅವರಿಗೆಲ್ಲಾ ತಿಂಗ್ಳು ತಿಂಗ್ಳು ಸ್ಯಾಲರಿ, ಅಲೋಯೆನ್ಸಸ್ ಎಲ್ಲಾ ಸರಿಯಾಗಿ ಕೊಡ್ತಿದ್ದೀವಲ್ಲ”
ಶಚಿದೇವಿ: “ಅದಕ್ಕಲ್ಲ, ಅವರ ಡಿಮ್ಯಾಂಡ್ ಬೇರೆ”
ಇಂದ್ರ: “ವಾಟ್ಸ್ ದಟ್”
ಶಚಿದೇವಿ: “ನೀವು ಸಡನ್ ಆಗಿ ಲಾಕ್ ಡೌನ್ ಅನೌನ್ಸ್ ಮಾಡಿದ್ರಲ್ಲ, ಪಾಪ ಅವ್ರಿಗೆ ತೊಂದ್ರೆ ಆಗ್ತಿದೆಯಂತೆ”
ಇಂದ್ರ: “ಓಹ್! ನಾನಾದ್ರೂ ಏನ್ ಮಾಡ್ಲಿ ಹೇಳು ಡಾರ್ಲಿಂಗ್? ಭೂಲೋಕದಲ್ಲಿ ನೋವಲ್ ಕರೋನಾ ಹಾವಳಿ ಮಿತಿ ಮೀರ್ತಿದೆ. ನೀನೇ ಡೈಲಿ ಟಿವಿಲಿ ಪೇಪರ್ ನಲ್ಲಿ ನೋಡ್ತಿದ್ಯಲ್ಲ. ಪಬ್ಲಿಕ್ ಟಿವಿ ರಂಗಣ್ಣನ ಬಿಗ್ ಬುಲೇಟಿನ್ ನಲ್ಲಿ ಈಗೀಗ ಬೇರೆ ಸುದ್ದಿಯೇ ಇಲ್ಲ ಅದು ಬಿಟ್ಟು. ಆ ದರಿದ್ರ ಚೀನಿ ವೈರಸ್ ಇಟಲಿಯಲ್ಲಿ, ಸ್ಪೇನ್ ನಲ್ಲಿ, ಅಮೇರಿಕಾದಲ್ಲಿ ಎಷ್ಟೆಲ್ಲಾ ಉಪದ್ರ ಕೊಡ್ತಿದೆ ಅಂತ. ಮೋದಿಜೀ ಲಾಕ್ ಡೌನ್ ಮಾಡಿದ ಮೇಲಲ್ವಾ ನಾನಿಲ್ಲಿ ಲಾಕ್ ಡೌನ್ ಅನೌನ್ಸ್ ಮಾಡಿದ್ದು.. ಐ ಡೋಂಟ್ ಹ್ಯಾವ್ ಅನದರ್ ಆಪ್ಷನ್ ಡಿಯರ್. ಇಟ್ಸ್ ನೀಡೆಡ್ ಸ್ಟೆಪ್ ನವ್. ನಮ್ಮ ದೇವಲೋಕದ ಆರೋಗ್ಯ ಕಾಪಾಡೋದು ಮೈ ರೆಸ್ಪಾನ್ಸಿಬಿಲಿಟಿ”
ಶಚಿದೇವಿ: “ಅದೆಲ್ಲಾ ಸರಿ ಪ್ರಭು. ಆದ್ರೆ ಅವರಿಗೆ ಲಾಕ್ ಡೌನ್ ಆದಮೇಲೆ ಸಿಗಬೇಕಾಗರೋದು ಸಿಗ್ತಿಲ್ವಂತೆ!”
ಇಂದ್ರ: “ಮೊನ್ನೆ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಕ್ಲಿಯರ್ ಮಾಡಿದ್ನಲ್ಲ ಅದ್ನೆಲ್ಲಾ! ಎರಡು ತಿಂಗಳು ರೇಷನ್ ಕೊಡೋಕೆ ಹೇಳಿದ್ದೀನಿ. ಮೆಡಿಸಿನ್ ಪ್ರೊವೈಡ್ ಮಾಡೋಕೆ ಧನ್ವಂತರಿಗೆ ಅಶ್ವಿನಿ ದೇವತೆಗಳಿಗೆ ಆರ್ಡರ್ ಮಾಡಿದ್ದೀನಿ. ಅಡುಗೆಗೆ ಅಗ್ನಿ ದೇವ ಫ್ರೀ ಗ್ಯಾಸ್ ವಿತ್ ಸಬ್ಸಿಡಿ ಪ್ರೊವೈಡ್ ಮಾಡ್ತಿದ್ದಾನೆ. ಕಾಮದೇನು ಎಂಡ್ ನಂದಿನಿಯರು ಡೈಲಿ ಹಾಲು ಕೊಡ್ತಿದ್ದಾರೆ. ಸೂರ್ಯ, ವಾಯು ಮತ್ತೆ ವರುಣ ಹಗಲು ರಾತ್ರಿ ಅನ್ನದೇ ತರಕಾರಿ ಹಣ್ಣುಗಳನ್ನು ಪ್ರೊಡ್ಯೂಸ್ ಮಾಡಿ ಡಿಸ್ಟ್ರಿಬ್ಯೂಟ್ ಮಾಡ್ತಾನೇ ಇದ್ದಾರೆ. ಮತ್ತೆಂತ ಬೇಕಂತೆ ಅವರ ಬೊಜ್ಜ”
ಶಚಿದೇವಿ: “ಅವೆಲ್ಲಾ ಸಿಕ್ತಿದೆ. ಬಟ್ ಅದಲ್ಲ ಇಷ್ಯೂ. ಅವರಿಗೆ ಸಿಗಬೇಕಾಗಿರೋದೆ ಸಿಕ್ತಿಲ್ಲ”
ಇಂದ್ರ: “ಸ್ಟ್ರೈಟ್ ಆಗಿ ಮ್ಯಾಟರ್ ಗೆ ಬಾ ಶಚಿ. ವಾಟ್ಸ್ ದೇರ್ ಡಿಮ್ಯಾಂಡ್?”
ಶಚಿದೇವಿ: “ಹೇಳಿಕೇಳಿ ಅವರು ನಾವು ಸುರರಲ್ವಾ. ಸುರೆಯಿಲ್ಲ ಅಂದ್ರೆ ಹ್ಯಾಗೆ ಅಂತ ಡಿಸಪಾಯಿಂಟ್ ಆಗಿ ಪ್ರೊಟೆಸ್ಟ್ ಮಾಡ್ತಿದ್ದಾರೆ”
ಇಂದ್ರದೇವ: “ಅದಾ ವಿಷ್ಯ? ಉಹೂಂ ಅಬಕಾರಿ ಮಿನಿಸ್ಟರ್ ಸೋಮದೇವನ ಹತ್ರ ಡಿಸ್ಕಸ್ ಮಾಡಬೇಕು ಡಿಯರ್. ಆರ್ಡರ್ ಪಾಸ್ ಮಾಡಿರೋದು ಅವನೇ. ಇಂಡಿಯಾದಲ್ಲೂ ಎಣ್ಣೆ ಅಂಗಡಿ ಎಲ್ಲಾ ಕ್ಲೋಸ್ ಆಗಿದೆ. ಲಾಕ್ ಡೌನ್ ಮುಗಿಯೋತನಕ ಓಪನ್ ಆಗಲ್ಲ. ಇಂಡಿಯಾ ರೆಫರೆನ್ಸ್ ಇಟ್ಕೊಂಡು ಸೋಮದೇವ ಡಿಸಿಷನ್ ಗೆ ಬಂದಿದ್ದಾನೆ. ತಪ್ಪು ಅಂತ ನಾನು ಹೇಗೆ ಹೇಳಲಿ ಅದನ್ನು?”
ಶಚಿದೇವಿ: “ದೇವಲೋಕದ ಇಂಪಾರ್ಟೆಮಟ್ ರಿಕ್ವೈರ್ ಮೆಂಟ್ ಅದೇ ಸ್ವಾಮಿ. ಇಂಡಿಯಾದಲ್ಲಿ ಮಾಡಿದ್ ಹಾಗೆ ಇಲ್ಲೂ ಮಾಡಿದ್ರೆ ಹೇಗೆ? ಅಮರಾವತಿ ಟೌನ್ ಇಡೀ ಸುರೆಯಂಗಡಿ, ಸೋಮರಸದ ಮಳಿಗೆಗಳು ಲಾಕ್ ಔಟ್ ಆಗಿದೆ. ಭೂಲೋಕದಲ್ಲಾದ್ರೆ ನೀರಾ, ಕಳ್ಳಬಟ್ಟಿ, ಬೈನೆ ಬಗಿನಿ ಮರದ ಹೆಂಡ, ತಾಳೆ ಮರದ ಹೆಂಡ, ಬೂತಾಯಿ ಗಿಡದ ಹೆಂಡ ಅಂತೆಲ್ಲಾ ಆಲ್ಟ್ರನೇಟಿವ್ ಇದೆ. ನಮಗೆ ಆ ಸೌಕರ್ಯವೂ ಇಲ್ಲ. ಅಪ್ಸರೆಯರೂ ಸಿಕ್ಕಾಪಟ್ಟೆ ಅಪ್ಸೆಟ್ ಆಗಿದ್ದಾರೆ ಡಿಯರ್. ಇದಕ್ಕೆ ತತಕ್ಷಣ ಏನಾದ್ರೂ ಮಾಡಲೇಬೇಕು”
ಇಂದ್ರ: “ಸುರಪತಿಯಾದ ನನಗೂ ಸುರೆ ಇಲ್ಲದೆ ಭಯಂಕರ ಖಿನ್ನತೆ ಕಾಡ್ತಿದೆ ದೇವಿ! ಆದ್ರೇನು ಮಾಡಲಿ ಹೇಳು ರೂಲ್ಸ್ ಎಲ್ಲರಿಗೂ ಒಂದೇ. ರೂಲ್ಸ್ ಬ್ರೇಕ್ ಯಾರೂ ಮಾಡಬಾರದು”
ಶಚಿದೇವಿ: “ಸ್ವಾಮಿ ಇದಕ್ಕೇನು ಸೊಲ್ಯೂಷನ್ ಇಲ್ವಾ?”
ಇಂದ್ರ: “ಒಂದೇ ಹನಿ ಸುರೆ ಕುಡಿಯದ ಗುರು ಬ್ರಹಸ್ಪತಿ ಒಂದು ಐಡಿಯಾ ಕೊಟ್ಟಿದ್ದಾನೆ. ಟ್ರೈ ಮಾಡೋಣ. ನೀನು ನೋಟ್ ಮಾಡ್ಕೋ. ಬ್ರಹಸ್ಪತಿ ಉಪದೇಶಿಸಿದ ರೆಸಿಪಿ ನಿಂಗೆ ಹೇಳಿಕೊಡ್ತೀನಿ. ಟ್ರೈ ಒನ್ಸ್. ಇಫ್ ದ ಔಟ್ ಪುಟ್ ಕಮ್ಸ್ ವೆಲ್ ದೆನ್ ವಿ ಕ್ಯಾನ್ ಡೂ ಇಟ್ ಇನ್ ಲಾರ್ಜ್ ಕ್ವಾಂಟಿಟಿ”
ಶಚಿದೇವಿ: (ಟ್ಯಾಬ್ ಆನ್ ಮಾಡಿ, ವಾಯ್ಸ್ ರೆಕಾರ್ಡರ್ ಚಾಲೂಯಿಸಿ) “ರೆಡಿ ಪ್ರಭು”
ಇಂದ್ರದೇವ: “ನಮಗಿಬ್ಬರಿಗೆ ಅನ್ನುವ ಲೆಕ್ಕದಲ್ಲಿ ಹೇಳ್ತೀನಿ. ತಲಾ ನಾಲ್ಕು ಗ್ಲಾಸ್ ಪೇಯ ಅಂತ ಮನಸಲ್ಲಿಟ್ಕೋ”
ಬೇಕಾಗುವ ಸಾಮಗ್ರಿಗಳು:
-ಹುಳಿಮಾವಿನ ಕಾಯಿ ಎರಡು
-ಜೀರಿಗೆ ಮೆಣಸು 10ರಿಂದ 12
-ಕಾಳು ಮೆಣಸಿನ ಪುಡಿ
-ಚೂರು ಹುಣಸೆ ಹಣ್ಣು ಮತ್ತು ಹಸಿಶುಂಟಿ
-ಚೂರು ಪರಿಮಳದ ಕೊತ್ತಂಬರಿ ಸೊಪ್ಪು
-ತೆಂಗಿನ ಕಾಯಿ ತುರಿ ಅರ್ಧ ಕಪ್
-ಒಗ್ಗರಣೆ ಸಾಮಗ್ರಿಗಳು ಇಂಗು ಸಹಿತ
ಮಾಡುವ ವಿಧಾನ:
* ಮೊದಲು ಹುಳಿ ಮಾವಿನ ಕಾಯಿ (ಅದರಲ್ಲೂ ಜೀರಿಗೆ ಮಾವು ಇದ್ದರೆ ತುಂಬಾ ಒಳ್ಳೇದು) ಯನ್ನು ಚೆನ್ನಾಗಿ ತೊಳೆದು ತೊಟ್ಟು ಸಹಿತ ಕುಕ್ಕರ್ ನಲ್ಲಿ ಇಟ್ಟು ಮೂರ್ನಾಲ್ಕು ವಿಷಲ್ ಬರುವಷ್ಟು ಬೇಯಿಸಿಕೋ.
* ಜೀರಿಗೆ ಮೆಣಸು, ಶುಂಟಿ, ಚೂರು ಹುಣಸೇಹಣ್ಣು, ಅರ್ಧ ಕಪ್ ತೆಂಗಿನ ತುರಿ, ಅರ್ಧ ಚಮಚ ಕಾಳು ಮೆಣಸಿನ ಪುಡಿ, ಚೂರು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಕ್ಸರ್ ನಲ್ಲಿ ಸಣ್ಣಗೆ ಪಾಯಸದ ರೀತಿ ರುಬ್ಬಿಕೋ.
* ಈಗ ತಣಿದ ಬೆಂದ ಮಾವಿನ ಕಾಯಿಯ ತಿರುಳನ್ನು ಬೇಯಿಸಿದ ನೀರಿನಲ್ಲೆ ಸಿಪ್ಪೆ ಮತ್ತು ಗೊರಟಿನ ಪಲ್ಪ್ ತೆಗೆದು ಕಿವುಚಿ ಇಟ್ಕೋ.
* ರುಬ್ಬಿದ ಮಿಶ್ರಣವನ್ನು ಈ ಪಲ್ಪ್ ಜೊತೆ ಬೆರೆಸಿ ತೆಗೆದಿಟ್ಕೋ.
* ಈ ಮಿಶ್ರಣಕ್ಕೆ ಇದರ ಹತ್ತರಷ್ಟು ಕೋಲ್ಡ್ ವಾಟರ್ ಮಿಕ್ಸ್ ಮಾಡು. ರುಚಿಗೆ ತಕ್ಕಷ್ಟು ಉಪ್ಪು ಹಾಕು.
* ಒಗ್ಗರಣೆ ಮಾಡೋದು ಬಹಳ ಇಂಪಾರ್ಟೆಂಟ್. ಲಿಸನ್ ಕೇರ್ ಫುಲಿ.
..ನಾಲ್ಕೈದು ಚಮಚ ತೆಂಗಿನ ಎಣ್ಣೆಯನ್ನು ಗ್ಯಾಸ್ ಸ್ಟೌವ್ ಮೇಲೆ ಬಿಸಿಗಿಡು. ಅದಕ್ಕೆ ಗಟ್ಟಿ ಇಂಗಿನ ಚೂರು ಸ್ವಲ್ಪ ಹಾಕಿ ಕರಗಿಸು. ನಂತ್ರ ಒಂದು ಚಮಚ ಮೆಂತ್ಯ, ಒಂದು ಚಮಚ ಜೀರಿಗೆ, ಒಂದು ಚಮಚ ಉದ್ದಿನ ಬೇಳೆ, ಒಂದು ಚಮಚ ಸಾಸಿವೆ, ಅರ್ಧ ಚಮಚ ಅರಿಷಿಣ ಹಾಕು. ಇವೆಲ್ಲಾ ಚಟಪಟ ಅಂತಿರುವಾಗ್ಲೇ ಕೊನೆಯಲ್ಲಿ ಸಣ್ಣಗೆ ಚೂರು ಮಾಡಿದ ಕರಿಬೇವಿನ ಸೊಪ್ಪು ಹಾಕಿ ಬಾಡಿಸಿಕೋ. ಬಾಳಕ ಮೆಣಸಿದ್ರೆ ಅದನ್ನೂ ಬಾಡಿಸಿಕೊಂಡ್ರೆ ಒಳ್ಳೇದು. ಇದನ್ನು ಮಾವಿನ ಕಾಯಿಯ ಹುಳಿ ರಸಾಯನದ ನೀರಿಗೆ ಹಾಕಿ ಕಲಕು.
* ಲಾಸ್ಟ್ ನಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಕಿದ್ರೆ ಅದ್ಭುತವಾದ ನೀರುಮಾವಿನ ಅಪ್ಪೇ ಸಾರು ರೆಡಿ ಟು ಡ್ರಿಂಕ್
“ನೋಡು ಇದರ ಘಮ ಅಷ್ಟೇ ಅಲ್ಲ ರುಚಿಯೂ ಅದ್ಭುತ. ಇದು ಡೈಜೆಷನ್ ಗೆ ಒಳ್ಳೆದು. ಮಾವು ಮತ್ತು ಇಂಗಿನ ಫ್ಲೇವರ್ ಇಡೀ ದಿನ ತೇಗಿದಾಗೆಲ್ಲ ಬರ್ತಿರತ್ತೆ. ಇದ್ರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ. ಮಾವಿನ ಕಾಯಿ ಪಿತ್ತ ಅಂತ ಇಂಗು, ಜೀರಿಗೆ, ಹುಣಸೇ ಹಣ್ಣು ಮಿಕ್ಸ್ ಮಾಡ್ತೀವಲ್ಲ ಸೋ ನೋ ಪ್ರಾಬ್ಲಂ. ಹಾಗೇ ಜೀರಿಗೆ ಮೆಣಸು ಹಾಕೋದ್ರಿಂದ ಗ್ಯಾಸ್ ಟ್ರಬಲ್ ಕೂಡಾ ಆಗಲ್ಲ. ಇದೊಂದ್ ರೀತಿ ಆಯುರ್ವೇದಿಕ್ ಸಸ್ಯ ಜನ್ಯ ಆಲ್ಕೋಹಾಲ್ ಇದ್ದ ಹಾಗೇನೆ. ಇಡೀ ದಿನ ಅಮಲಿನಲ್ಲಿ ತೇಲ್ತಿರ್ತೀವಿ. ಭೋಜನವಾದ ನಂತರ ಒಂದೇ ಗ್ಲಾಸ್ ನೀರುಗೊಜ್ಜು ಕುಡಿದ್ರೂ ಸಾಕು; ಅದ್ಭುತವಾದ ನಿದ್ದೆ ಬರತ್ತೆ”
ಶಚಿದೇವಿ: “ಗ್ರೇಟ್ ಪ್ರಾಣಕಾಂತ. ಅದ್ಭುತವಾದ ಪೇಯದ ರೆಸಿಪಿ ಕಂಡು ಹಿಡಿದ್ರಿ ನೀವು. ಈಗ್ಲೇ ಟ್ರೈ ಮಾಡ್ತೀನಿ. ಅಪ್ಸರೆಯರ ಹೆಲ್ಪ್ ಕೂಡಾ ತಗೊಳ್ತೀನಿ. ಪಾಪ ಅವರಿಗೂ ಕ್ವಾರಂಟೈನ್ ನಲ್ಲಿದ್ದು ಬೋರ್ ಆಗ್ತಿರತ್ತೆ”
ಇಂದ್ರ: “ಗೋ ಅಹೆಡ್ ದೇವಿ. ಹಾಂ ಈ ಫಾರ್ಮುಲಾ ಸಕ್ಸಸ್ ಆದ್ರೆ ನಮ್ಮ ಸೋಮರಸದ ಮಳಿಗೆಗಳಲ್ಲಿ ಮುಂದೆ ಇದನ್ನೇ ಮಾರಾಟ ಮಾಡೋಣ. ಇಂಡಿಯಾದಲ್ಲೂ ಇದನ್ನೇ ಪ್ರಮೋಟ್ ಮಾಡೋಕೆ ಮೋದಿಜಿಗೆ ಮೇಲ್ ಮಾಡ್ತೀನಿ. ಪ್ರೊಡ್ಯೂಸ್ ಮಾಡೋಕೆ ಪಥಂಜಲಿಯ ಬಾಬಾ ರಾಮ್ ದೇವ ಇದ್ದಾನೆ ಅಲ್ಲಿ. ಅವನಿಗೆ ಇದೆಲ್ಲಾ ಈಸಿಯಾಗಿ ಅರ್ಥ ಆಗತ್ತೆ. ಮದ್ಯಪಾನ ಹೀಗಾದ್ರೂ ಮುಕ್ತವಾದ್ರೆ ದೇವಲೋಕ ಭೂಲೋಕ ಎರಡರಲ್ಲೂ ನೆಮ್ಮದಿ. ಏನಂತೀಯಾ”
ಶಚಿ ದೇವಿ ದೇವಲೋಕದ ಉಗ್ರಾಣದ ಕಡೆಗೆ ಹೊರಡಲು ಎದ್ದು ನಿಲ್ಲುತ್ತಾಳೆ, ಇಂದ್ರ ಕುಳಿತಲ್ಲಿಂದಲೇ ದೇವಗುರು ಬ್ರಹಸ್ಪತಿಯನ್ನು ನೆನೆಸಿಕೊಂಡು ಕೈ ಮುಗಿಯುತ್ತಾನೆ.
-ಇತಿ ದೇವಲೋಕದ ನವಸುರೆ ಮಾವಿನ ಕಾಯಿ ಅಪ್ಪೇ ಸಾರು ಸೃಷ್ಟಿ ಪುರಾಣ ಸಮಾಪ್ತಿ.
-ವಿಭಾ
***








