ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ (Paralympics) ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಹಾಗೂ ಕಂಚು ಒಲಿದು ಬಂದಿವೆ.
ಪುರುಷರ ಹೈ ಜಂಪ್ ಟಿ47 ಸ್ಪರ್ಧೆಯಲ್ಲಿ ಭಾರತದ (India) ನಿ24 ವರ್ಷದ ಶಾದ್ ಕುಮಾರ್ (Nishad Kumar) ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರೆ ಪ್ರೀತಿ ಪಾಲ್ (Preethi Pal) ಕಂಚಿನ (Bronze) ಪದಕ ಗೆದ್ದಿದ್ದಾರೆ.
ಹೈ ಜಂಪ್ ನಲ್ಲಿ ನಿಶಾದ್ 2.04 ಮೀಟರ್ ಎತ್ತರ ಜಿಗಿಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಗೆದ್ದರು. ಅಮೆರಿಕದ ಟೌನ್ಸೆಂಡ್ 2.12 ಮೀ ಜಿಗಿಯುವದರ ಮೂಲಕ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ತಟಸ್ಥ ಪ್ಯಾರಾಲಿಂಪಿಕ್ ಅಥ್ಲೀಟ್ ಗಳನ್ನು ಪ್ರತಿನಿಧಿಸಿದ್ದ ಜಾರ್ಜಿ ಮಾರ್ಗೀವ್ (ರಷ್ಯಾ) ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ನಿಶಾದ್ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಕೂಡ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು. ಪ್ರೀತಿ ಪಾಲ್ ಅವರು 200 ಮೀಟರ್ ಓಟದಲ್ಲಿ (ಟಿ35 ವಿಭಾಗ) ಮೂರನೇ ಸ್ಥಾನ ಪಡೆಯುವದರ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಪ್ರೀತಿ 30.01 ಸೆಕೆಂಡ್ ಗಳಲ್ಲಿ ವೈಯಕ್ತಿಕ ಶ್ರೇಷ್ಠ ಸಮಯದಲ್ಲಿ ಗುರಿ ಮುಟ್ಟಿ ಕಂಚು ಗೆದ್ದರು. ಇದಕ್ಕೆ ಮುನ್ನ ನಡೆದಿದ್ದ ಮಹಿಳೆಯರ 100 ಮೀಟರ್ಸ್ ಓಟ (ಟಿ35) ವಿಭಾಗದಲ್ಲಿಯೂ ಪ್ರೀತಿ ಕಂಚು ಗೆದ್ದಿದ್ದಾರೆ.
ಈ ಮೂಲಕ ಪ್ರೀತಿ, ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ದಾಖಲೆ ಬರೆದಿದ್ದಾರೆ. ಸದ್ಯ ಭಾರತದ ಬುಟ್ಟಿಯಲ್ಲಿ 7 ಪದಕಗಳಿವೆ. 1 ಚಿನ್ನ, 2 ಬೆಳ್ಳಿ, 4 ಕಂಚಿನ ಪದಕಗಳನ್ನು ಭಾರತ ಗೆದ್ದಿದೆ.