ಮುಂದುವರಿದ ರಾಜ್ಯಗಳ ಲಾಕ್ ಡೌನ್ – ಇಂದಿನಿಂದ ಮತ್ತೊಂದು ರಾಜ್ಯ ಒಂದು ವಾರ ಸಂಪೂರ್ಣ ಸ್ತಬ್ಧ
ಸಿಕ್ಕಿಂ, ಜುಲೈ 21: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಸಿಕ್ಕಿಂ ಸರ್ಕಾರವು ಇಂದಿನಿಂದ ಒಂದು ವಾರ ಸಂಪೂರ್ಣ ಲಾಕ್‌ಡೌನ್ ವಿಧಿಸಲು ನಿರ್ಧರಿಸಿದೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಅಂಗಡಿಗಳು, ಜಿಮ್‌ಗಳು, ಮಾಲ್‌ಗಳು, ವ್ಯಾಪಾರ ವಹಿವಾಟುಗಳು ಮತ್ತು ಶಿಕ್ಷಣ ಸಂಸ್ಥೆಗಳು ಲಾಕ್‌ಡೌನ್ ಅವಧಿಯಲ್ಲಿ ಮುಚ್ಚಲ್ಪಡುತ್ತವೆ. ಅಷ್ಟೇ ಅಲ್ಲ, ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳು ಸೇರಿದಂತೆ ಖಾಸಗಿ ವಾಹನಗಳ ಸಂಚಾರವನ್ನೂ ನಿಷೇಧಿಸಲಾಗಿದೆ.ಸಿಕ್ಕಿಂನಲ್ಲಿ ಕೊರೊನಾವೈರಸ್ ಪ್ರಕರಣ 283 ಕ್ಕೆ ತಲುಪಿದ್ದು, ಒಟ್ಟು ಪ್ರಕರಣಗಳಲ್ಲಿ 191 ಸಕ್ರಿಯವಾಗಿವೆ ಮತ್ತು 92 ಗುಣಮುಖವಾಗಿವೆ.

ಮಣಿಪುರ, ನಾಗಾಲ್ಯಾಂಡ್, ಸಿಕ್ಕಿಂ, ಮಿಜೋರಾಂ ಜೊತೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶೇಕಡಾ ಶೂನ್ಯ ಸಾವಿನ ಪ್ರಮಾಣವನ್ನು ಹೊಂದಿದ್ದರೆ, 14 ರಾಜ್ಯಗಳು ಶೇಕಡಾ 1 ಕ್ಕಿಂತ ಕಡಿಮೆ ಸಿ.ಎಫ್ಆರ್ ಹೊಂದಿವೆ.
ಏತನ್ಮಧ್ಯೆ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಂದೇ ದಿನ 40,425 ಪ್ರಕರಣಗಳು ವರದಿಯಾಗಿದೆ. ಇದರ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 11,19,043 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 687 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಒಟ್ಟು ಸಾವಿನ ಸಂಖ್ಯೆ 27,497 ಕ್ಕೆ ಏರಿದೆ. ಯುಎಸ್ ಮತ್ತು ಬ್ರೆಜಿಲ್ ನಂತರ ಭಾರತವು ಮೂರನೇ ಅತಿ ಹೆಚ್ಚು ಕೊರೊನಾ ಸೋಂಕು ಪೀಡಿತ ದೇಶವಾಗಿ ಮುಂದುವರೆದಿದೆ ಮತ್ತು ಕಳೆದ 24 ಗಂಟೆಗಳಲ್ಲಿ 32,56,059 ಮಾದರಿಗಳನ್ನು ಪರೀಕ್ಷಿಸಲಾಗಿದೆ.








