ಅಕ್ಟೋಬರ್ 1ರಿಂದ ಮೈಸೂರು ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ..!
ಮೈಸೂರು : ಅಕ್ಟೋಬರ್ 1 ರಿಂದ ಪ್ರವಾಸಿಗರಿಗೆ ಮೈಸೂರು ಅರಮನೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ನಾಡಹಬ್ಬ ದಸರಾ ಪ್ರಯುಕ್ತ ಮೈಸೂರು ರಾಜಮನೆತನದವರು ಅರಮನೆ ಒಳಗಗೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿರುವುದರಿಂದ ಅ.1ರಿಂದ ವಿವಿಧ ದಿನಾಂಕಗಳಂದು ಅರಮನೆ ವೀಕ್ಷಣೆಗೆ ಪ್ರವಾಸಿಗರ ಪ್ರವೇಶಕ್ಕೆ ಬ್ರೇಕ್ ಹಾಕಲಾಗಿದೆ.
ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರು ನೀಡಿರುವ ಮಾಹಿತಿ ಪ್ರಕಾರ ಅಕ್ಟೋಬರ್ 1ರಂದು ಸಿಂಹಾಸನ ಜೋಡಣೆ ನೆರವೇರಿಸಲಾಗುತ್ತದೆ. ಹೀಗಾಗಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ನಂತರ ಅಕ್ಟೋಬರ್ 7ರಂದು ಖಾಸಗಿ ದರ್ಬಾರ್‍ನಲ್ಲಿ ರಾಜವಂಶಸ್ಥರು ಧಾರ್ಮಿಕ ಪೂಜೆ ನಡೆಸಲಿದ್ದಾರೆ. ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕರ ಪ್ರವೇಶ ನಿಷೇಸಲಾಗಿದೆ.
ಅಕ್ಟೋಬರ್ 14ರಂದು ಆಯುಧ ಪೂಜೆ ಪ್ರಯುಕ್ತ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ಪ್ರವಾಸಿಗರಿಗೆ ನಿಷೇಧವಿದೆ. ಅಕ್ಟೋಬರ್ 15ರಂದು ವಿಜಯದಶಮಿ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಇನ್ನೂ ಅಕ್ಟೋಬರ್ 31ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಿಂಹಾಸನ ವಿಸರ್ಜನಾ ಕಾರ್ಯಕ್ರಮ ನಿಮಿತ್ತ ಪ್ರವೇಶ ನಿರ್ಬಂಸಲಾಗಿದೆ.