‘ಅನುಷ್ಕಾಸ್ ನಿಶ್ಯಬ್ಧ’ದೊಂದಿಗೆ ಕನ್ನಡ ವರ್ಣಮಾಲೆಯಲ್ಲಿ ಸ್ವೀಟಿ ಶೆಟ್ಟಿ
ಆಕೆ ಮುಕುಟ ವಿಲ್ಲದ ಮಹಾರಾಣಿ, ಅಂದ ಅಭಿನಯ ಒಂದು ಸ್ಥಳದಲ್ಲಿ ಕೂಡಿದರೇ ಅದು ಖಚಿತವಾಗಿ ಅನುಷ್ಕಾ ಶೆಟ್ಟಿಯೇ. ಒಂದು ಕಡೆ ಗ್ಲಾಮರ್, ಇನ್ನೊಂದು ಕಡೆ ಅದ್ಭುತ ಪರ್ಫಾಮೆನ್ಸ್ ಮೂಲಕ ಎಲ್ಲರನ್ನು ಮಂತ್ರಮುಗ್ಧರನ್ನಾಗಿ ಮಾಡಬಲ್ಲ ನಟಿ. ತಮ್ಮ ಅಮೋಘ ಅಭಿನಯದ ಮೂಲಕ ಟಾಲಿವುಡ್, ಕಾಲಿವುಡ್ ನಲ್ಲಿ ನಂಬರ್ 1 ಪಟ್ಟಕ್ಕೇರಿರುವ ಅಪ್ಪಟ ಕನ್ನಡತಿ. ನಮ್ಮ ಕನ್ನಡದವರಾದ್ರೂ ಟಾಲಿವುಡ್ ನ ಮನೆಮಗಳಾದ ಅಭಿನೇತ್ರಿ. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ದಶಕವೇ ಕಳೆದ್ರೂ ಇನ್ನೂ ಕರಾವಳಿ ಬೆಡಗಿ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ. ಆದ್ರೂ ಕನ್ನಡಾಭಿಮಾನವನ್ನ ಬಿಡದ ಸ್ವೀಟಿ ಅನುಷ್ಕಾ ಶೆಟ್ಟಿ.
ಅಂದಹಾಗೆ ಕನ್ನಡದ ಹೆಮ್ಮೆ ಅನುಷ್ಕಾ ಶೆಟ್ಟಿ ಅವರಿಗೆ “ಎಲ್ಲೇ ಇರು ಎಂದೆಂದಿಗೂ ಕನ್ನಡವಾಗಿರು ಅನ್ನೋ ಕುವೆಂಪುರವರ ವ್ಯಾಖ್ಯಾನ ಹೇಳಿ ಮಾಡಿಸಿದಂತಿದೆ. ಯಾಕೆಂದ್ರೆ ಈಗಾಗಲೇ ತೆಲುಗು ತಮಿಳು ಸಿನಿಮಾರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿರುವ ಅನುಷ್ಕಾ ಕನ್ನಡ ಪ್ರೇಮವನ್ನ ಮಾತ್ರ ಮರೆತಿಲ್ಲ.
ಇದ್ಯಾಕಪ್ಪಾ ಈಗ ಅನುಷ್ಕಾ ಶೆಟ್ಟಿ ವಿಷ್ಯ ಅಂತ ಅಂದ್ಕೊಂಡ್ರಾ..? ಮುಂದೆ ಓದಿ…
ನಿಶ್ಯಬ್ಧ ವಾಗಿ ಚಂದನವನಕ್ಕೆ ಅರುಂಧತಿ..!
ಹೌದು..! ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಮಾಧವನ್ ಜೊತೆ ನಟಿಸ್ತಿರೋ ‘ನಿಶಬ್ದಂ’ ಸಿನಿಮಾ, ‘ನಿಶ್ಯಬ್ಧ ಹೆಸರಲ್ಲಿ ಕನ್ನಡದಲ್ಲೂ ಬರಲಿದೆ. ಸದ್ಯ ಸಿನಿಮಾದ ‘ನಿನ್ನೇ ನಿನ್ನೇ ಕಣ್ಣಿನಲ್ಲಿ’ ಸಾಂಗ್ ರಿಲೀಸ್ ಆಗಿದ್ದು, ಈ ಬಗ್ಗೆ ಸ್ವತಃ ಅನುಷ್ಕಾ ಶೆಟ್ಟಿ ಅವರೇ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಅನುಷ್ಕಾ ಶೆಟ್ಟಿ ಫೇಸ್ ಬುಕ್ ನಲ್ಲಿ… ‘ನಿನ್ನೇ ನಿನ್ನೆ ಕಣ್ಣಿನಲ್ಲಿ ತುಂಬಿಕೊಂಡೇ …. ನನ್ನ ಮೊದಲ ಕನ್ನಡ ಲಿರಿಕಲ್ ವಿಡಿಯೋ.. ನಿಮಗಾಗಿ ಇಲ್ಲಿದೆ – ನಿಮ್ಮ ಅನುಷ್ಕಾ ಶೆಟ್ಟಿ’ ಎಂದು ಕನ್ನಡದಲ್ಲೇ ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಮೂಲಕ ಮತ್ತೆ ಕನ್ನಡಾಭಿಮಾನ ಮೆರೆದು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ ‘ದೇವಸೇನಾ’.
ಇನ್ನು ಸ್ವೀಟಿಯ ಕನ್ನಡ ಪ್ರೇಮಕ್ಕೆ ಅರುಂಧತಿ ಅಭಿಮಾನಿಗಳು ಫಿದಾ ಆಗಿದ್ದು, ನಿಮ್ಮ ಈ ತಾಯ್ನುಡಿ ಭಾಷಾ ಪ್ರೇಮ ಹೀಗೆ ಇರಲಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ರಿಲೀಸ್ ಆಗಿರುವ ಹಾಡು ಕೂಡ ಯುಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಭಾರಿ ಲೈಕ್ಸ್ ಮತ್ತು ವೀವ್ಸ್ ಪಡೆದುಕೊಳ್ಳುತ್ತಾ ಮುನ್ನುಗ್ಗುತ್ತಿದೆ.
ಇನ್ನು ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ತೆರೆಗೆ ಬರಲಿರುವ ಈ ಚಿತ್ರವು ಕನ್ನಡದಲ್ಲಿ ಮಾತ್ರ ‘ಅನುಷ್ಕಾಸ್ ನಿಶ್ಯಬ್ಧ’ ಹೆಸರಿನಲ್ಲಿ ತೆರೆಕಾಣಲಿದೆ. ಹೇಮಂತ್ ಮಧುಕರ್ ನಿರ್ದೇಶನದ ಈ ಸಿನಿಮಾದಲ್ಲಿ ಮಾಧವನ್, ಸುಬ್ಬರಾಜು, ಅಂಜಲಿ ಮುಂತಾದವರು ನಟಿಸಿದ್ದಾರೆ.