ಬೆಂಗಳೂರು : ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವಂತೆ ಅಮಿತ್ ಶಾ ಒತ್ತಡ ಹೇರಿದ್ದಾರೆ.
ಕಾಂಗ್ರೆಸ್ ಹೋರಾಟಕ್ಕಾಗಿ ಹುಟ್ಟಿರುವ ಪಕ್ಷ. ದುರ್ಬಲರ ಪರವಾಗಿರುವ ಪಕ್ಷ. ಬಿಜೆಪಿಯವರಂತಹ ನಯ ವಂಚಕರು ಎಲ್ಲಿಯೂ ಸಿಗುವುದಿಲ್ಲ ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಡೋಂಗಿ ರೈತ ನಾಯಕ.
ಪ್ರಮಾಣ ವಚನ ತೆಗೆದುಕೊಳ್ಳುವಾಗ ರೈತನ ಮಗ ಎಂದು ರೈತರ ಹೆಸರು ಹೇಳುತ್ತಾರೆ.
ಅವರು ನಿಜವಾಗಲೂ ರೈತನ ಮಗ ಆಗಿದ್ದರೆ, ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿರಲಿಲ್ಲ ಎಂದು ಬಿಎಸ್ ವೈ ವಿರುದ್ಧ ಬೆಂಕಿಕಾರಿದರು.
ಇದನ್ನೂ ಓದಿ :ಪೇಟ ತೊಟ್ಟು ಕತ್ತೆ ಮೇಲೇರಿ ಮೆಜೆಸ್ಟಿಕ್ ರೌಂಡ್ಸ್ ಹಾಕಿದ ವಾಟಾಳ್
ಹಸಿರು ಶಾಲ್ ಹಾಕಿದ ತಕ್ಷಣ ರೈತರಾಗಲು ಸಾಧ್ಯವಿಲ್ಲ. ಯಡಿಯೂರಪ್ಪ ಡೋಂಗಿ ಅಲ್ಲದೇ ಬೇರೆ ಇನ್ನೇನು. ಕಾಂಗ್ರೆಸ್ ರೈತರ ಪರವಾಗಿ ಮೊದಲಿನಿಂದಲೂ ಹೋರಾಟ ಮಾಡುತ್ತ ಬಂದಿದೆ.
ಮುಂದೆಯೂ ರೈತರ ಪರವಾಗಿ ಹೋರಾಟ ಮಾಡುತ್ತೇವೆ. ಬೆಂಗಳೂರು ಸುತ್ತಮುತ್ತ ಸುಮಾರು 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದವು ಅವುಗಳನ್ನು ಈ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರದ್ದು ಪಡಿಸಿದ್ದಾರೆ.
ಅದನ್ನೂ ದುಡ್ಡಿಗಾಗಿ ಮಾಡಿದ್ದಾರೆ. ಯಡಿಯೂರಪ್ಪನವರೇ ಎಷ್ಟು ಲೂಟಿ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಅಗತ್ಯ ಇದ್ದರೆ ಮಾತ್ರ ಸುಗ್ರೀವಾಜ್ಞೆ ತರುತ್ತಾರೆ. ಆದ್ರೆ ಬಿಜೆಪಿ ನಾಯಕರು ಕೊರೊನಾ ಸಂದರ್ಭದಲ್ಲಿ ಲೂಟಿ ಮಾಡಲು ಈ ಕಾಯ್ದೆ ತಿದ್ದುಪಡಿ ಮಾಡಿದ್ದಾರೆ.
ಪಿಪಿಇ ಕಿಟ್ ಖರೀದಿಯಲ್ಲೂ ಹೊಡೆದಿದ್ದಾರೆ. ಬಿಡಿಎ ಹಗರಣದಲ್ಲಿ ಬಿಎಸ್ ವೈ ಮಗ, ಅಳಿಯ, ಮೊಮ್ಮಗ ಹಣ ಪಡೆದಿದ್ದಾರೆ.
ಮೊಮ್ಮಗ ಶಶಿಧರ ಮರಡಿ ಅಕೌಂಟ್ ಗೆ ಆರ್ ಟಿ.ಜಿಎಸ್ ಮೂಲಕ 7.4 ಕೋಟಿ ಹಣ ವರ್ಗಾವಣೆಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.








