ಲಾಕ್ ಡೌನ್ ಹಿನ್ನೆಲೆಯಲ್ಲಿ ಮನೆಯಿಂದ ಹೊರ ಬರಬೇಡಿ ಎಂದು ದೇಶದ ಪಿ.ಎಂ. ನರೇಂದ್ರ ಮೋದಿ ಹೇಳಿದ್ದು ಆಯಿತು, ರಾಜ್ಯದ ಸಿ.ಎಂ ಯಡಿಯೂರಪ್ಪ ಹೇಳಿದ್ದು ಆಯಿತು, ಅಷ್ಟೇ ಅಲ್ಲದೆ ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯೂ ಹೇಳಿದ್ದು ಆಯಿತು. ಇದೀಗ ಪೊಲೀಸರ ಮಕ್ಕಳು ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಮಾಡಲಾಗಿದೆ. ಆದರೆ ಸಾರ್ವಜನಿಕರು ಮನೆಯಿಂದ ಹೊರ ಬರುವುದನ್ನು ನಿಲ್ಲಿಸುತ್ತಿಲ್ಲ. ಹಾಗಾಗಿ ಪೊಲೀಸರು ಪ್ರಾರಂಭದಲ್ಲಿ ಮನೆಯಿಂದ ಹೊರ ಬರಬೇಡಿ ಎಂದು ಮನವಿ ಮಾಡಿದ್ದರು. ಸಾರ್ವಜನಿಕರು ಮಾತು ಕೇಳಲಿಲ್ಲ. ಹಾಗಾಗಿ ಪೊಲೀಸರು ಲಾಠಿ ಪ್ರಸಾದ ನೀಡುತ್ತಿದ್ದಾರೆ. ಆದರೆ ಜನರ ಮಾತ್ರ ಇದಕ್ಕೆ ಕ್ಯಾರೇ ಅನ್ನುತ್ತಿಲ್ಲ. ಅಲ್ಲದೆ ಈ ಸಮಯದಲ್ಲಿ ಪೊಲೀಸರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ರಸ್ತೆಗಿಳಿಯುತ್ತಿದ್ದಾರೆ. ಜೊತೆಗೆ 24 ಗಂಟೆಗಳ ಸೇವೆ ಮಾಡುತ್ತಿದ್ದಾರೆ. ಇದರಿಂದಾಗಿ ತಮ್ಮ ಕುಟುಂಬಗಳ ಜೊತೆಗೆ ಕಾಲ ಕಳೆಯಲಾಗುತ್ತಿಲ್ಲ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ದಯಮಾಡಿ ಮನೆಯಿಂದ ಹೊರ ಬರಬೇಡಿ. ಸಾರ್ವಜಿನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಪೊಲೀಸರು ಕೆಲಸ ಮುಗಿಸಿ ಮನೆಗೆ ಹೋದರೇ ಕುಟುಂಬದ ಸದಸ್ಯರಿಂದ ದೂರ ಉಳಿಯುತ್ತಿದ್ದಾರೆ. ಇದೇ ವೇಳೆ ಪೊಲೀಸರ ಮಕ್ಕಳು ಮಾಡಿರುವ ಮನವಿಯನ್ನು ಅವರು ಹಂಚಿಕೊಂಡಿದ್ದಾರೆ. ಸಾರ್ವಜನಿಕರ ಸುರಕ್ಷತೆಗಾಗಿ ನಮ್ಮ ತಂದೆ-ತಾಯಿ ಮನೆಯಿಂದ ಹೊರ ಬಂದು ಕೆಲಸ ಮಾಡುತ್ತಿದ್ದಾರೆ. ತಂದೆ – ತಾಯಿ ಮನೆಗೆ ಬಂದರು ಸಹ ಅವರಿಂದ ದೂರ ಉಳಿಯುತ್ತಿದ್ದೇವೆ. ಸಮೀಪ ಹೋಗಲು ಆಗುತ್ತಿಲ್ಲ. ಹಾಗಾಗಿ ಮನೆಯಲ್ಲಿ ಇದ್ದು ಸಹಕರಿಸಿ ಅಂತ ಪೊಲೀಸರ ಮಕ್ಕಳು ಜನರಲ್ಲಿ ಮನವಿ ಮಾಡಿದ್ದಾರೆ. ಈ ಸಂದೇಶವನ್ನು ಸಂಚಾರಿ ಜಂಟಿ ಆಯುಕ್ತ ರವಿಕಾಂತೇಗೌಡ ಹಂಚಿಕೊಂಡಿದ್ದಾರೆ.