ನವದೆಹಲಿ: ಕೊರೊನಾ ವೈರಸ್ ಇಡೀ ವಿಶ್ವವನ್ನೇ ಸ್ತಬ್ಧವಾಗಿಸಿದೆ. ಇದರಿಂದಾಗಿ ಎಲ್ಲರೂ ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ. ಕೆಲ ಸೆಲೆಬ್ರಿಟಿಗಳು ಕೂಡ ಕೊರೊನಾ ವೈರಸ್ ತಡೆಯಲು ಹಲವಾರು ಟಿಪ್ಸ್ ಗಳು ಮತ್ತು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದೀಗ ವಿರಾಟ್ ಮತ್ತು ಅನುಷ್ಕಾ ವಿಡಿಯೋ ಮಾಡುವ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಪತಿ ಪತ್ನಿ ಜೊತೆಯಲ್ಲೇ ಕುಳಿತು ಕೊರೊನಾ ಬಗ್ಗೆ ವಿಡಿಯೋ ಮಾಡಿದ್ದು, ಅನುಷ್ಕಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಈಗ ನಾವೆಲ್ಲ ಬಹಳ ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವೈರಸ್ ಅನ್ನು ತಡೆಹಿಡಿಯಬೇಕಿದೆ. ನಾವು ನಮ್ಮ ಸುರಕ್ಷತೆಗಾಗಿ ಮನೆಯಲ್ಲೇ ಇದ್ದೇವೆ. ಹಾಗೇ ನೀವು ಕೂಡ ನಿಮ್ಮ ಸುರಕ್ಷತೆಗೆ ಮನೆಯಲ್ಲೇ ಇರಿ. ನಾವೆಲ್ಲರೂ ಸೇರಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬೇಕು. ನಾವಾಗಿಯೇ ಐಸೋಲೇಷನ್ ನಲ್ಲಿ ಇರೋಣ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಕೊರೊನಾ ವಿಚಾರವಾಗಿ ವಿರಾಟ್ ಕೊಹ್ಲಿ ಸಾಲು ಸಾಲು ಟ್ವೀಟ್ ಮಾಡಿದ್ದು, ಗಮನವಿರಲಿ ಕೊರೊನಾ ವೈರಸ್ ಅನ್ನು ಎದುರಿಸಲು ಜಾಗರೂಕರಾಗಿರಿ. ಜವಾಬ್ದಾರಿಯುತ ನಾಗರಿಕರಾದ ನಾವು ನಮ್ಮ ಸುರಕ್ಷತೆಗಾಗಿ ಗೌರವಾನ್ವಿತ ಪ್ರಧಾನಿ ಮೋದಿ ಅವರು ಘೋಷಿಸಿದಂತೆ ಜಾರಿಗೆ ತಂದಿರುವ ನಿಯಮಗಳಿಗೆ ಬದ್ಧರಾಗಿರಬೇಕು. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾ ವಿರುದ್ಧ ಹೊರಾಡೋಣ ಎಂದಿದ್ದಾರೆ








