ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಸಚಿವ ಸ್ಥಾನ ಸಿಗದ ಶಾಸಕರನ್ನು ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾರಿ ಆದೇಶ ಹೊರ ಬೀಳುತ್ತಿದ್ದಂತೆ ಬಿಜೆಪಿ ಶಾಸಕರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಶಾಸಕರ ಬಂಡಾಯದ ಬಿಸಿ ಹೊಸ ತಲೆನೋವಾಗಿ ಪರಿಣಮಿಸಿದೆ.
ಕಳೆದ ನಾಲ್ಕು ತಿಂಗಳಿಂದ ಕೊರೊನಾ ಕಾರಣಕ್ಕೆ ಯಾವುದೇ ರಾಜಕೀಯ ತೀರ್ಮಾನಗಳಿಗೆ ಯಡಿಯೂರಪ್ಪ ಕೈಹಾಕಿರಲಿಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷ ಗಡಿದಾಟಿದ್ದು, ಚಿಕಿತ್ಸೆ ಕೊಡಿಸಲು ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಕೊರೊನಾ ಕಾರಣದಿಂದಾಗಿಯೇ ಸಚಿವ ಸಂಪುಟ ವಿಸ್ತರಣೆಯಂತಹ ಮಹತ್ವದ ನಿರ್ಧಾರಗಳಿಗೆ ಯಡಿಯೂರಪ್ಪ ಅವರು ಕೈಹಾಕಿರಲಿಲ್ಲ.

ಲಾಕ್‍ಡೌನ್‍ನಂತಹ ಯಾವುದೇ ಪ್ರಯತ್ನಗಳಿಂದಲೂ ಕೊರೊನಾ ಕಟ್ಟಿಹಾಕಲು ಸಾಧ್ಯವಾಗದು ಎಂಬ ಅರಿತ ಸರ್ಕಾರ, ಕೊರೊನಾದೊಂದಿಗೆ ನಾವು ಬದುಕಬೇಕು ಎನ್ನುವ ಮೂಲಕ ಜನಜೀವನ ಸಹಜ ಸ್ಥಿತಿ ಮರಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.
ಇದರ ಬೆನ್ನಲ್ಲೇ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕವೆಂಬ ಜೇನುಗೂಡಿಗೆ ಯಡಿಯೂರಪ್ಪ ಕೈಹಾಕಿದ್ದಾರೆ. ನಿಗಮ-ಮಂಡಳಿ ನೇಮಕದಿಂದ ಶಾಸಕರ ಅಸಮಾಧಾನ ಸ್ಫೋಟಗೊಳ್ಳಲಿದೆ ಎಂಬ ಕಾರಣಕ್ಕಾಗಿಯೇ ಕೊರೊನಾ ನೆಪವೊಡ್ಡಿ ಮುಂದಕ್ಕೆ ಹಾಕುತ್ತಾ ಬಂದಿದ್ದರು.

ನಿಗಮ-ಮಂಡಳಿ ಪಟ್ಟಿ ಹೊರ ಬೀಳುತ್ತಿದ್ದಂತೆ ಶಾಸಕರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅವರಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್, ಚಿತ್ರದುರ್ಗ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಮೂಡಿಗೆರೆ ಶಾಸಕ ಕುಮಾರಸ್ವಾಮಿ, ತೇರದಾಳ ಶಾಸಕ ಸಿದ್ದು ಸವದಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಕೆಲ ಶಾಸಕರಂತೂ ನಾವು ನಿಗಮ ಮಂಡಳಿಗಳೇ ಬೇಡ, ವಾಪಸ್ ಕೊಡುತ್ತೇವೆ ಎಂದು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ನಾಲ್ವರ ನೇಮಕ ವಾಪಸ್
ನಿಗಮ-ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಹಿರಿಯ ಶಾಸಕ ಅಸಮಾಧಾನದ ಹಿನ್ನೆಲೆಯಲ್ಲಿ ನಾಲ್ವರ ನೇಮಕವನ್ನು ವಾಪಸ್ ಪಡೆದಿದ್ದಾರೆ.
ಚಿತ್ರದುರ್ಗ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ಪರಣ್ಣ ಮುನವಳ್ಳಿ, ಬಸವರಾಜ ಧಡೇಸೂರ್ ಹಾಗೂ ಲಾಲ್‍ಜಿ ಮೆಂಡನ್ ಅವರ ನೇಮಕ ಆದೇಶ ವಾಪಸ್ ಪಡೆಯಲಾಗಿದೆ.
ದೇವರಾಜ ಅರಸು ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದ್ದಕ್ಕೆ ಜಿ.ಹೆಚ್ ತಿಪ್ಪಾರೆಡ್ಡಿ ಗರಂ ಆಗಿದ್ದಾರೆ. ನಾನು ಮಂತ್ರಿಯಾಗಬೇಕಾದವನು. 1998ರಲ್ಲೇ ಗೃಹಮಂಡಳಿಯ ಅಧ್ಯಕ್ಷನಾಗಿ ಕ್ಯಾಬಿನೆಟ್ ದರ್ಜೆ ಹುದ್ದೆ ಅಲಂಕರಿಸಿದ್ದೇನೆ. ಈಗ ಕೊಟ್ಟ ದೇವರಾಜ ಅರಸು ಅಭಿವೃದ್ಧಿ ನಿಗಮದಲ್ಲಿ ವರ್ಷಕ್ಕೆ ನಾಲ್ಕು ಬೋರ್‍ವೆಲ್ ಕೊರೆಸಬಹುದು ಅಷ್ಟೇ. ಅದರ ಬದಲು ನಾನು ಶಾಸಕನಾಗಿಯೇ ಆ ಕೆಲಸ ಮಾಡಿಸುತ್ತಿದ್ದೇನೆ. ಹೀಗಾಗಿ ಆ ಹುದ್ದೆ ಬೇಡ ಎಂದು ಖಡಕ್ಕಾಗಿಯೇ ತಿರಸ್ಕರಿಸಿದ್ದಾರೆ.
ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನಗೆ ಈ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಸ್ಥಾನ ಬೇಕಿಲ್ಲ. ಈ ಬಗೆ ಸಿಎಂ ಬಿಎಸ್‍ವೈ ಅವರನ್ನು ಭೇಟಿ ಚರ್ಚಿಸುತ್ತೇನೆ ಎಂದಿದ್ದಾರೆ.








