ಜೇಮ್ಸ್ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಸಿನಿಮಾ. ಚಿತ್ರಕ್ಕೆ ಜೇಮ್ಸ್ ಅಂತ ಹೆಸರಿಟ್ಟಾಗಿನಿಂದಲೂ ಗಾಂಧಿನಗರದಲ್ಲಿ ಜೇಮ್ಸ್ ಪಠಣೆ ಜೋರಾಗಿದೆ. ಲೇಟ್ ಆಗಿ ಸಿನಿಮಾ ಸೆಟ್ಟೇರಿದ್ದರೂ ಲೇಟೆಸ್ಟ್ ಆಗಿ ಬರೋಕೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಅದರಂತೆ ಕೆಲಸ ಕಾರ್ಯಗಳೂ ನಡೆದಿವೆ, ನಡೆಯುತ್ತಿವೆ. 2020ರ ಆರಂಭದಲ್ಲಿ ಸೆಟ್ಟೇರಿದ ಜೇಮ್ಸ್ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿದೆ.
ಇನ್ನೇನು 2ನೇ ಹಂತದ ಶೂಟಿಂಗ್ ಆರಂಭಿಸಬೇಕು ಎನ್ನುವಾಗಲೇ ಲಾಕ್ ಡೌನ್ ಚಿತ್ರೀಕರಣಕ್ಕೆ ಫುಲ್ ಸ್ಟಾಪ್ ಹಾಕ್ತು. ಸದ್ಯ ಇದೀಗ ಸದ್ದಿಲ್ಲದೇ ಚಿತ್ರದ ಮತ್ತೊಂದು ಹಂತದ ಕೆಲಸವೂ ಆರಂಭವಾಗಿದೆ.
ಸಿನಿಮಾದಲ್ಲಿ ಇರಲಿವೆ ಐದು ಸಾಂಗ್ಸ್
ಜೇಮ್ಸ್ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ. ಇದಕ್ಕೆ ಕಾರಣ ಜೇಮ್ಸ್ ಅನ್ನೋ ಹೆಸರು, ಹಾಗೇ ಅಪ್ಪು-ಚೇತನ್ ಕಾಂಬಿನೇಷನ್. ಈಗಾಗಲೇ ಚಿತ್ರತಂಡ ಮೋಷನ್ ಟೀಸರ್ ರಿಲೀಸ್ ಮಾಡಿದ್ದು ಜೇಮ್ಸ್ ಹವಾ ಮತ್ತಷ್ಟು ಜೋರಾಗುವಂತೆ ಮಾಡಿದೆ. ಲಾಕ್ ಡೌನ್ ನಡುವೆ ಇದೀಗ ಸದ್ದಿಲ್ಲದೇ ಜೇಮ್ಸ್ ಹಾಡುಗಳ ಕೆಲಸ ಆರಂಭಿಸಿದೆ ಚಿತ್ರತಂಡ. ಈ ಬಗ್ಗೆ ಭರ್ಜರಿ ಚೇತನ್ ಮಾಹಿತಿ ನೀಡಿದ್ದು, ‘ಲಾಕ್ ಡೌನ್ ಕಾರಣದಿಂದಾಗಿ ಫ್ರೀ ಇರೋದ್ರಿಂದ ಹಾಡುಗಳ ಕೆಲಸ ಮುಗಿಸುವ ಯೋಚನೆಯಲ್ಲಿದ್ದೆ. ಅದರಂತೆ ಇಂದಿನಿಂದ ಹಾಡಿನ ಸಾಹಿತ್ಯ ಬರವಣಿಗೆ ಶುರುವಾಗಿದೆ. ಸಿನಿಮಾದಲ್ಲಿ ಒಟ್ಟು ಐದು ಹಾಡುಗಳು ಇರಲಿವೆ. ಎಲ್ಲಾ ಹಾಡುಗಳಿಗೂ ನನ್ನದೇ ಸಾಹಿತ್ಯ ಇರುತ್ತಾ..? ಇಲ್ಲವಾ..? ಅಂತಾ ನಿರ್ಧರಿಸಿಲ್ಲ. ಬೇರೆಯವರ ಅಗತ್ಯವಿದೆ ಎಂದಾದರೇ ಪಕ್ಕಾ ಬರೆಸುತ್ತೇನೆ’ ಅಂತಾ ತಿಳಿಸಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಿಸಿಕೊಳ್ತಾರೆ. ಇದು ಸಂಪೂರ್ಣ ಕೌಟುಂಬಿಕ ಮನರಂಜನೆಯ ಸಿನಿಮಾ ಆಗಿದ್ದು, ಸಾಮಾಜಿಕ ಸಂದೇಶವೂ ಇರಲಿದೆ ಅಂತಾ ತಿಳಿಸಿದ್ದಾರೆ ಚೇತನ್.








