ಇಂದು ಏಪ್ರಿಲ್ 10.. ಅದೆಷ್ಟೋ ದಶಕಗಳ ಇತಿಹಾಸವಿರುವ ಪಾಸ್ ಫೈಲ್ ದಿನ. ಮೊದಲ ಬಾರಿಗೆ ಕೊರೊನಾ ಸೋಂಕಿನ ಕಾರಣದಿಂದ ಈ ಬಾರಿ ಪಾಸ್ ಪೈಲ್ ದಿನದ ಕಾತುರ, ಸಂಭ್ರಮ ಮರೆಯಾಗಿದೆ.
ಏಪ್ರಿಲ್ 10ಕ್ಕೆ ಕಾತುರದಿಂದ ಕಾದಿರುತ್ತಿದ್ದ ಮಕ್ಕಳು ಈ ದಿನ ಬೇಗನೆ ಎದ್ದು, ಸ್ನಾನ ಮಾಡಿ, ದೇವರಿಗೆ ಲೆಕ್ಕಕ್ಕಿಂತ ಸ್ವಲ್ಪ ಜಾಸ್ತಿಯೇ ಅಡ್ಡಬಿದ್ದು, ಶಾಲೆ ತೆರೆಯುವ ಮೊದಲೇ ಪಾಸ್ ಫೈಲ್ ನೋಡಲು ಹೋಗುವ ಸಂಭ್ರಮವನ್ನು ವರ್ಣಿಸಲು ಹೇಗೆ ತಾನೇ ಸಾಧ್ಯ.
ನಮ್ಮ ಶಾಲಾ ದಿನಗಳಲ್ಲಿ ಅಂಕಗಳಿಗಿಂತ ಪಾಸ್ ಫೈಲ್ ಗೆ ಮಾತ್ರ ಆದ್ಯತೆ ಇತ್ತು. ಆ ದಿನ ಸರಿಯಾಗಿ 10 ಗಂಟೆಯ ಸಮಯಕ್ಕೆ ತರಗತಿಯ ನೋಟಿಸ್ ಬೋರ್ಡ್ ನಲ್ಲಿ ಶಿಕ್ಷಕರು ಪಾಸಾದ ವಿದ್ಯಾರ್ಥಿಗಳ ಹೆಸರಿರುವ ಪಟ್ಟಿಯನ್ನು ಪ್ರಕಟಿಸುತ್ತಿದ್ದಂತೆ, ಮುಗಿಬಿದ್ದು ನಮ್ಮ ಹೆಸರಿರುವುದನ್ನು ನೋಡಿ ಸಂಭ್ರಮಿಸುತ್ತಿದ್ದ ನಾವು, ಫೈಲಾಗಿ ಆಳುತ್ತಿದ್ದ ಮಕ್ಕಳಿಗೆ ಸಮಾಧಾನ ಮಾಡಿ ನಮ್ಮೊಡನೆ ಕರೆದೊಯ್ದುತ್ತಿದ್ದ ದಿನಗಳನ್ನು ಮರೆಯಲು ಸಾಧ್ಯವೇ..
ಇತ್ತೀಚಿನ ದಿನಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಪಾಸ್ ಎಂಬ ಸರ್ಕಾರದ ಆದೇಶ ಬಂದ ಮೇಲೆ ಮೊದಲಿದ್ದ ಫಲಿತಾಂಶ ದಿನದ ಕಾತುರ, ಭಯ ಮರೆಯಾಗಿ ಪಾಸ್ ಫೈಲ್ ದಿನವೆಂದರೆ ಮಕ್ಕಳು ಪಡೆದ ಅಂಕಗಳನ್ನು ತಿಳಿಯುವ ದಿನವಾಗಿದ್ದರೂ ಆ ದಿನದ ಸಂಭ್ರಮ ಕಡಿಮೆಯಾಗಿರಲಿಲ್ಲ. ಏಪ್ರಿಲ್ 10ರಂದು ಮಕ್ಕಳ ಮುಖದಲ್ಲಿ ಖುಷಿಯೋ ಖುಷಿ. ಒಂದೆಡೆ ಅಧಿಕೃತವಾಗಿ ರಜೆಯ ಘೋಷಣೆಯಾಗುವ ಸಂಭ್ರಮ ಅವರ ಮುಖದಲ್ಲಿ ಎದ್ದು ಕಾಣುತ್ತಿದ್ದರೆ, ಇನ್ನೊಂದೆಡೆ ರಜೆಯಲ್ಲಿ ಎಲ್ಲೆಲ್ಲಿ ಸುತ್ತಾಟ ತಿರುಗಾಟ ಎಂಬ ವರದಿಯನ್ನು ಶಾಲಾ ಶಿಕ್ಷಕರಲ್ಲಿ, ಸ್ನೇಹಿತರಲ್ಲಿ ಹಂಚಿಕೊಳ್ಳುವ ಸಂಭ್ರಮ. ಅಷ್ಟೇ ಅಲ್ಲ ಇಂದಿನ ದಿನಗಳಲ್ಲಿ ಫಲಿತಾಂಶದ ದಿನವೆಂದರೆ ಅನೇಕ ಮಕ್ಕಳಿಗೆ ಅಧಿಕ ಅಂಕ ಪಡೆದರೆ, ಪೋಷಕರು ನೀಡಿದ ಭರವಸೆ ಈಡೇರುವ ದಿನ.
ಅಧಿಕ ಅಂಕ ಗಳಿಸಿದ ಮಕ್ಕಳ ಹೆತ್ತವರು ಜಗತ್ತನ್ನೇ ಗೆದ್ದ ಸಂಭ್ರಮದಲ್ಲಿರುತ್ತಿದ್ದರೆ, ಕಡಿಮೆ ಅಂಕ ಗಳಿಸಿದ ಮಕ್ಕಳ ಹೆತ್ತವರು ಹ್ಯಾಪ್ ಮೋರೆ ಹಾಕಿಕೊಂಡು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿರುತ್ತಿದ್ದರು. ಮಕ್ಕಳು ಮಾತ್ರ ಇದ್ಯಾವುದರ ಪರಿವೇ ಇಲ್ಲದೆ ಸ್ನೇಹಿತರೊಡನೆ ರಜೆಯ ಸಂಭ್ರಮದ ಮೋಜಿನಲ್ಲಿ, ಹರಟೆ ಹೊಡೆಯುವುದರಲ್ಲಿ ಬಿಝಿ.
ಮನೆಗೆ ಬಂದ ಮೇಲೆ ಶಾಲಾ ಬ್ಯಾಗ್ ಅನ್ನು ಒಂದೆಡೆ ಎಸೆದು ನೆರೆಹೊರೆಯವರಿಗೆ ಸಿಹಿತಿಂಡಿ ಹಂಚಿ, ಬಂಧುಬಳಗಕ್ಕೆ ಪಡೆದಿರುವ ರ‌್ಯಾಂಕ್, ಮಾರ್ಕುಗಳನ್ನು ಹೇಳಿ ರಜೆಯ ತಿರುಗಾಟದ ತಯಾರಿಗೆ ರೆಡಿಯಾಗುತ್ತಿದ್ದರು. ಇತ್ತ ಕಡೆ ಹೆತ್ತವರು ರಜೆಯ ಅವಧಿಯಲ್ಲಿ ಬೇಸಿಗೆ ಶಿಬಿರ, ವಿವಿಧ ಕೋಚಿಂಗ್ ತರಗತಿಗೆ ಸೇರಿಸಿ ಮಕ್ಕಳ ರಜೆಯ ಸದುಪಯೋಗ ಪಡೆಯಲು ನೋಡುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದ ಎಲ್ಲದಕ್ಕೂ ಕತ್ತರಿ ಬಿದ್ದಿದೆ. ರಜೆ ಸಿಕ್ಕಿದರೂ ಅದನ್ನು ಅನುಭವಿಸದ ಸ್ಥಿತಿಯಲ್ಲಿ ಮಕ್ಕಳಿದ್ದಾರೆ. ಕೊರೋನಾದಿಂದಾಗಿ ಈ ಬಾರಿ ಮಕ್ಕಳಿಗೆ ಮನೆಯ ಗೇಟ್ ದಾಟುವಂತಿಲ್ಲ. ಟಿವಿ ಮೊಬೈಲ್ ಗಳ ದಾಸರಾಗಿರುವ ಮಕ್ಕಳ ಬಗ್ಗೆ ಚಿಂತಿತರಾಗಿರುವ ಹೆತ್ತವರು ಕೊರೋನಾಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಯಾವಾಗಲೂ ಎರಡು ತಿಂಗಳ ರಜೆ ಪೂರ್ಣಗೊಳ್ಳುವ ಮೊದಲೇ ತರಗತಿ ಆರಂಭಿಸಿ ವಿದ್ಯಾರ್ಥಿಗಳನ್ನು ಕಲಿಕೆಗೆ ಅಣಿಗೊಳಿಸುತ್ತಿದ್ದ ಶಾಲಾ ಮಂಡಳಿ ಮತ್ತು ಶಿಕ್ಷಕರಿಗೆ ಮೇಯವರೆಗೆ ರಜೆ ಮುಂದುವರಿದಿರುವುದು ನುಂಗಲಾರದ ತುತ್ತಾಗಿದೆ.








