ಅಶ್ವತ್ಥ್ ನಾರಾಯಣ್ ತಪ್ಪಿಲ್ಲ : ಆರಗ ಜ್ಞಾನೇಂದ್ರ
ಶಿವಮೊಗ್ಗ : ರಾಮನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಮತ್ತು ಸಚಿವ ಅಶ್ವಥ್ ನಾರಾಯಣ್ ನಡುವಿನ ಜಟಾಪಟಿ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಅಶ್ವಥ್ ನಾರಾಯಣ್ ಬ್ಯಾಟಿಂಗ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ರಾಮನಗರ ಭಾಗದಲ್ಲಿ ತೋಳ್ಬಲದ ರಾಜಕಾರಣ ನಡಿತಿದೆ ಎಂದರೆ ಅವರ ಅವನತಿಯ ಪ್ರತೀಕ. ಅಭಿವೃದ್ಧಿ ಮಾತನಾಡುವುದು ಬಿಟ್ಟು ತೋಳೇರಿಸಿಕೊಂಡು ಹೋಗುವುದೇನಿತ್ತು..? ತೋಳ್ಬಲದ ರಾಜಕಾರಣ ಬಿದ್ದು ಹೋಗಿರುವುದು ಹಿಂದೆ ಸಾಬೀತಾಗಿದೆ. ಅವರಿಗೂ ಮಾತನಾಡಲು ಅವಕಾಶ ಇತ್ತು. ಹಾಗಾದರೆ ಇವರ ಪ್ರಕಾರ ವಿಧಾನಸಭೆಯಲ್ಲೂ ಹೊಡೆದಾಡಬೇಕೆ ಎಂದು ಪ್ರಶ್ನಿಸಿದ್ದಾರೆ.
ಸಚಿವರು ಪ್ರಚೋದನೆಗೊಳ್ಳುವಂತಹ ಯಾವುದೇ ಮಾತನಾಡಿರಲಿಲ್ಲ. ಅಶ್ವತ್ಥ ನಾರಾಯಣ್ ಅವರ ತಪ್ಪು ಕಾಣುತ್ತಿಲ್ಲ. ಇದರಲ್ಲಿ ಪೊಲೀಸ್ ವೈಫಲ್ಯವೂ ಇಲ್ಲ. ಮನೆ ಮನೆಗೆ ಹೋಗಿ ಕರೆಯಲು ಅದು ಯಾರ ಮನೆಯ ಕಾರ್ಯಕ್ರಮವೂ ಆಗಿರಲಿಲ್ಲ ಎಂದು ಆರಗ ಜ್ಞಾನೇಂದ್ರ ಡಿ.ಕೆ.ಸುರೇಶ್ ಗೆ ಟಾಂಗ್ ನೀಡಿದ್ದಾರೆ.
ಇನ್ನು ಮತಾಂತರ ನಿಷೇಧ ಕಾಯ್ದೆಯನ್ನು 5 ನೇ ತಾರೀಖಿನಿಂದ ಆರಂಭಗೊಳ್ಳಲಿರುವ ಸದನದಲ್ಲಿ ಮಂಡಿಸಲಾಗುವುದು. ಬೆಳಗಾವಿ ಅಧಿವೇಶನದಲ್ಲಿ ಪರಿಷತ್ ನಲ್ಲಿ ನಮ್ಮ ಸಂಖ್ಯೆ ಕಡಿಮೆ ಇದ್ದ ಕಾರಣ ಮಂಡಿಸಲಾಗಲಿಲ್ಲ. ಈಗ ನಮಗೆ ಪೂರ್ಣ ಬಹುಮತ ಇದೆ ಮಂಡಿಸುತ್ತೇವೆ. ಇದರಲ್ಲಿ ಯಾವುದೇ ವೈಫಲ್ಯ ಆಗಿಲ್ಲ ಎಂದು ತಿಳಿಸಿದ್ದಾರೆ.









