ಲಡಾಖ್ ಗಡಿ ಪ್ರದೇಶದಲ್ಲಿ ಮುಳ್ಳುತಂತಿ ಬೇಲಿಗಳನ್ನು ನಿರ್ಮಿಸಿ ರೆಡ್‍ಲೈನ್ ಘೋಷಿಸಿದ ಭಾರತೀಯ ಸೇನಾ ಪಡೆ
ಲಡಾಕ್, ಸೆಪ್ಟೆಂಬರ್10: ಪೂರ್ವ ಲಡಾಕ್‌ನ ಪ್ಯಾಂಗಾಂಗ್‍ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ ಪ್ರದೇಶದಲ್ಲಿ ಮುಳ್ಳುತಂತಿ ಬೇಲಿಗಳನ್ನು ಭಾರತೀಯ ಸೇನಾಪಡೆ ನಿರ್ಮಿಸಿ ಅದನ್ನು ರೆಡ್‍ಲೈನ್ ಎಂದು ಘೋಷಿಸಿದೆ.
ಅಷ್ಟೇ ಅಲ್ಲ ರೆಡ್‍ಲೈನ್ ಉಲ್ಲಂಘಿಸಿದರೆ ಅಗತ್ಯವಾದ ಪ್ರತೀಕಾರ ಉಂಟಾಗುತ್ತದೆ ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಬುಧವಾರ ಹೇಳಿದ್ದಾರೆ. ಪೂರ್ವ ಲಡಾಖ್‍ನ ಗಡಿ ಪ್ರದೇಶದ ಅತ್ಯಂತ ಎತ್ತರದ ಸ್ಥಳವಾದ ಫಿಂಗರ್ ಫೋರ್ ಇದೀಗ ಭಾರತೀಯ ಸೇನಾಪಡೆಗಳ ಹಿಡಿತದಲ್ಲಿದ್ದು, ಭಾರತೀಯ ಯೋಧರು ಪ್ಯಾಂಗಾಂಗ್‍ತ್ಸೋ ಸರೋವರದ ದಕ್ಷಿಣ ಮತ್ತು ಉತ್ತರ ದಂಡೆಯಲ್ಲಿ ಮುಳ್ಳು ತಂತಿಬೇಲಿಗಳನ್ನು ಅಳವಡಿಸಿದ್ದಾರೆ.
ಉತ್ತರ ಭಾಗದ ಇನ್ನೊಂದು ಕಡೆಯಲ್ಲಿ ಚೀನಾ ಅನಧಿಕೃತ ನಿರ್ಮಾಣ ಮತ್ತು ಸೇನಾ ಜಮಾವಣೆಯನ್ನು ಮುಂದುವರೆಸಿರುವ ಹಿನ್ನೆಲೆಯಲ್ಲಿ ಭಾರತ ತನ್ನ ಪ್ರದೇಶಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಬೆದರಿಕೆ ಕ್ರಮಗಳನ್ನು ಎದುರಿಸಲು ಈ ತಂತ್ರ ಅಳವಡಿಸಿದೆ.
45 ವರ್ಷಗಳಲ್ಲಿ ಮೊದಲ ಬಾರಿಗೆ ಚುಶುಲ್ ಸೆಕ್ಟರ್‌ನ ಮುಖ್ಪಾರಿ ಟಾಪ್ ಬಳಿ ಸೋಮವಾರ ಗುಂಡುಗಳನ್ನು ಹಾರಿಸಿದ ನಂತರ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಅವರ ಚೀನಾದ ಕೌಂಟರ್ ವಾಂಗ್ ಯಿ ನಡುವೆ ಗುರುವಾರ ಮಾಸ್ಕೋದಲ್ಲಿ ನಿರೀಕ್ಷಿತ ಸಭೆ ನಡೆಯುವ ಮುನ್ನ ಈ ಎಚ್ಚರಿಕೆ ನೀಡಲಾಗಿದೆ.








