ಭಾರತೀಯ ಸೇನೆಯಲ್ಲಿ ಬಾಂಬ್ ತಯಾರಕನ ಮಗನೊಬ್ಬನ ಸಂಘರ್ಷಪೂರ್ಣ ಕ್ರಿಕೆಟ್ ಜರ್ನಿ:
ಅದೊಂದು ಕಡು ಬಡತನದ ಕುಟುಂಬ. ಆ ಕುಟುಂಬದ ಸದಸ್ಯರ ಒಟ್ಟು ಸಂಖ್ಯೆ ಎಂಟು. ಅಪ್ಪ -ಅಮ್ಮ, ಐವರು ಗಂಡು ಮಕ್ಕಳು ಮತ್ತು ಓರ್ವ ಹೆಣ್ಣು ಮಗಳು. ಈ ಕುಟುಂಬದ ತಿಂಗಳ ವರಮಾನ ಕೇವಲ ಹತ್ತು ಸಾವಿರ ರೂಪಾಯಿ. ಈ ಹತ್ತು ಸಾವಿರ ರೂಪಾಯಿನಲ್ಲಿ ಆರು ಮಕ್ಕಳ ಶಿಕ್ಷಣದ ಜೊತೆ ಮನೆಯ ಖರ್ಚು ವೆಚ್ಚ ಎಲ್ಲವನ್ನೂ ನೋಡಿಕೊಳ್ಳಬೇಕು. ಅದ್ರಲ್ಲೂ ಒಬ್ಬ ಮಗ ಕ್ರಿಕೆಟ್ ಅಕಾಡೆಮಿಗೆ ಸೇರಿಕೊಂಡಿದ್ದ. ಮಗನ ಪ್ರತಿಭೆಯನ್ನು ಕಣ್ಣಾರೆ ನೋಡುತ್ತಿದ್ದ ಅಪ್ಪನಿಗೆ ಮಗನ ಕ್ರಿಕೆಟ್ ಪ್ರತಿಭೆಯನ್ನು ಕಮರಿ ಹೋಗುವಂತೆ ಮಾಡುವುದು ಇಷ್ಟವಿರಲಿಲ್ಲ. ಅದಕ್ಕಾಗಿಯೇ ಪ್ರತಿ ತಿಂಗಳು 5 ಸಾವಿರ ರೂಪಾಯಿಯಿಂದ 8 ಸಾವಿರ ರೂಪಾಯಿ ಕ್ರಿಕೆಟ್ ಅಕಾಡೆಮಿಗೆ ಕಟ್ಟುತ್ತಿದ್ದ ಅಪ್ಪ, ಮಗನ ಕ್ರಿಕೆಟ್ ಬದುಕಿಗೆ ಭದ್ರ ಅಡಿಪಾಯ ಹಾಕಿದ್ದ. ಹೀಗೆ ಸುಮಾರು ಎಂಟು ವರ್ಷ ಇದೇ ರೀತಿ ಕಷ್ಟಪಟ್ಟು ದುಡಿಯುತ್ತಾ ಮನೆಯ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದ ಆ ಅಪ್ಪನ ತ್ಯಾಗ, ಬದ್ಧತೆಗೆ ಮಗ ಈಗಂತೂ ತಕ್ಕ ಪ್ರತಿಫಲವನ್ನು ನೀಡಿದ್ದಾನೆ.
ಇದು ಟೀಮ್ ಇಂಡಿಯಾದ ಸ್ಟಾರ್ ಆಟಗಾರನಾಗಿದ್ದ ಸುರೇಶ್ ರೈನಾ ಅವರ ಬದುಕಿನ ಕಥೆ.
ಪ್ರತಿಭೆ ಯಾರಪ್ಪನ ಸ್ವತ್ತು ಅಲ್ಲ. ಎಷ್ಟೇ ಬಡತನವಿರಲಿ, ಎಷ್ಟೇ ಕಷ್ಟವಿರಲಿ. ಪ್ರತಿಭೆಗೆ ಒಂದಲ್ಲ ಒಂದು ದಿನ ಅವಕಾಶ ಸಿಕ್ಕಿಯೇ ಸಿಗುತ್ತದೆ ಎಂಬುದು ಸುರೇಶ್ ರೈನಾ ಜೀವನದ ಚಿತ್ರಣವೇ ಉತ್ತಮ ನಿದರ್ಶನ. ಸುರೇಶ್ ರೈನಾ ಅವರ ತಂದೆ ತ್ರಿಲೋಕ್ ಚಂದ್ ರೈನಾ, ಮಿಲಿಟರಿ ಅಧಿಕಾರಿ. ಬಾಂಬ್ ತಯಾರಿಕೆಯಲ್ಲಿ ನಿಪುಣರಾಗಿದ್ದರು. ಆದ್ರೆ ಅವರಿಗೆ ಸಿಗುತ್ತಿದ್ದ ಸಂಬಳ ಮಾತ್ರ ಹತ್ತು
ಸಾವಿರ ರೂಪಾಯಿ. ಈ ಹತ್ತು ಸಾವಿರ ರೂಪಾಯಿ ಮಗ ಸುರೇಶ್ ರೈನಾ ಕ್ರಿಕೆಟ್ ಬದುಕಿಗೆ ಉತ್ತೇಜನ ನೀಡಲು ಸಾಕಾಗುತ್ತಿರಲಿಲ್ಲ. ಆದ್ರೂ ಮಗನ ಕ್ರಿಕೆಟ್ ಆಸೆಗೆ ತ್ರಿಲೋಕ್ ಚಂದ್ ಅಡ್ಡಿಪಡಿಸಲಿಲ್ಲ. ಆದ್ರೆ ಎರಡು ದಶಕಗಳ ನಂತ್ರ ಎಲ್ಲವೂ ಬದಲಾಗಿ ಹೋಯ್ತು. ಅಪ್ಪನ ಕಷ್ಟದ ದಿನಗಳನ್ನು ದೂರ ಮಾಡಿದ್ದ ಸುರೇಶ್ ರೈನಾ ವಿಶ್ವ ಕ್ರಿಕೆಟ್ ನಲ್ಲಿ ಅಪ್ರತಿಮ ಸಾಧನೆ ಮಾಡಿ ಈ ಸಂಸಾರವನ್ನು ನೆಮ್ಮದಿಯಿಂದ ಜೀವನ ಸಾಗಿಸುವಂತೆ ಮಾಡಿದ್ದಾರೆ.
ಸುರೇಶ್ ರೈನಾ ಅವರ ನಿಕ್ ನೇಮ್ ಸೋನು. ಇವ್ರು ಮೂಲತಃ ಜಮ್ಮು ಕಾಶ್ಮೀರದವರು. 1990ರಲ್ಲಿ ಕಾಶ್ಮೀರಿ ಪಂಡಿತರನ್ನು ಕೊಲೆ ಮಾಡಲಾಗುತ್ತಿತ್ತು. ಹೀಗಾಗಿ ಕುಟುಂಬದ ರಕ್ಷಣೆಗಾಗಿ ತ್ರಿಲೋಕ್ ಚಂದ್ ಅವರು ಜಮ್ಮು ಕಾಶ್ಮೀರವನ್ನು ಬಿಟ್ಟು ಉತ್ತರ ಪ್ರದೇಶಕ್ಕೆ ವಲಸೆ ಬಂದ್ರು. ಜಮ್ಮು ಕಾಶ್ಮೀರದ ರೈನಾವಾರಿಯಿಂದ ರೈನಾ ಕುಟುಂಬ ಉತ್ತರ ಪ್ರದೇಶದ ಗಾಝಿಯಾಬಾದ್‍ನ ಮುರುದ್‍ನಗರದಲ್ಲಿ ಜೀವನ ಸಾಗಿಸಲು ಶುರು ಮಾಡಿದ್ದರು. ಸುರೇಶ್ ರೈನಾ ತಂದೆ ತ್ರಿಲೋಕ್ ಚಂದ್ ಅವರು ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅದ್ರ ಬಗ್ಗೆ ಅವರು ಮಾತನಾಡುವುದು ಇಲ್ಲ. ಕಾಶ್ಮೀರದಲ್ಲಿ ಬ್ರಾಹ್ಮಣರನ್ನು ಯಾವ ರೀತಿ ಕೊಲೆ ಮಾಡಲಾಗುತ್ತಿತು, ಸೈನಿಕರು ಯಾವ ರೀತಿ ಹುತಾತ್ಮರಾಗುತ್ತಿದ್ದರು ಎಂಬುದನ್ನು ತ್ರಿಲೋಕ್ ಚಂದ್ ಅವರು ಕಣ್ಣಾರೆ ನೋಡಿದ್ದರು. ಹೀಗಾಗಿ ಅವರು ಹಿಂದಿನ ಬದುಕಿನ ಬಗ್ಗೆ ಏನನ್ನು ಹೇಳುತ್ತಿಲ್ಲ. ಅದು ಅವರಿಗೆ ಇಷ್ಟವೂ ಇಲ್ಲವಂತೆ.
ಇನ್ನು 1998ರಲ್ಲಿ ಸುರೇಶ್ ರೈನಾ ಅವರ ಅದೃಷ್ಟವೇ ಬದಲಾಗಿ ಹೋಯ್ತು. ಲಕ್ನೋದಲ್ಲಿರುವ ಗುರು ಗೋವಿಂದ್ ಸಿಂಗ್ ಸ್ಪೋರ್ಟ್ ಕಾಲೇಜ್‍ಗೆ ರೈನಾ ಸೇರಿಕೊಂಡಿದ್ದರು. ಅಲ್ಲಿ ವಾರ್ಷಿಕ ಶುಲ್ಕವಾಗಿ ಐದು ಸಾವಿರ ಕಟ್ಟಬೇಕಾಗಿತ್ತು. ಇಲ್ಲಿ ರೈನಾ ಅವರು ಕ್ರಿಕೆಟ್ ಆಟದ ಜೊತೆ ಶಿಕ್ಷಣಕ್ಕೂ ಆದ್ಯತೆ ನೀಡಿದ್ರು. ಆರು ವರ್ಷಗಳ ಸತತ ಪರಿಶ್ರಮದಿಂದ ರೈನಾ ಗ್ರೆಗ್ ಚಾಪೆಲ್ ಅವರ ಕಣ್ಣಿಗೆ ಬಿದ್ದರು. ಆ ನಂತರ ಹಿಂತಿರುಗಿ ನೋಡಲೇ ಇಲ್ಲ. 2005ರಲ್ಲಿ ಟೀಮ್ ಇಂಡಿಯಗೆ ಎಂಟ್ರಿಯಾದ್ರು. ನಾಯಕ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ರು. ಹಾಗೇ ಒಡನಾಡಿ, ಆಪ್ತ ಮಿತ್ರ ಧೋನಿಯ ಬೆಂಬಲದಿಂದ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.
ಎಡಗೈ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದ ರೈನಾ ಹಲವು ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಅದ್ಭುತ ಫೀಲ್ಡಿಂಗ್, ಪಾರ್ಟ್ ಟೈಮ್ ಬೌಲರ್ ಮೂಲಕವೂ ಗಮನ ಸೆಳೆದಿದ್ದರು. ಅಲ್ಲದೆ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಶತಕ ಸಿಡಿಸಿದ್ದ ಹಿರಿಮೆಯೂ ಇವರದ್ದಾಗಿದೆ. ಇದೀಗ ತನ್ನ 33ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.
ಹಾಗೇ 2020ರ ಐಪಿಎಲ್‍ಗೆ ಸಕತ್ ತಯಾರಿ ಕೂಡ ಮಾಡಿಕೊಂಡಿದ್ದರು. ಆದ್ರೆ ಅಚ್ಚರಿಯ ರೀತಿಯಲ್ಲಿ ವೈಯಕ್ತಿಕ ಕಾರಣ ನೀಡಿ ಐಪಿಎಲ್ ಟೂರ್ನಿಯಿಂದ ಹೊರನಡೆದಿದ್ದಾರೆ. ತನ್ನ ಸೋದರತ್ತೆಯ ಕುಟುಂಬದ ಮೇಲೆ ಅನಾಮಿಕರು ಭೀಕರ ದಾಳಿ ನಡೆಸಿರುವುದು ಐಪಿಎಲ್ ನಿಂದ ಹೊರನಡೆಯಲು ಕಾರಣ ಅಂತ ಹೇಳಲಾಗುತ್ತಿದೆ. ಆದ್ರೆ ಇನ್ನೊಂದು ಮೂಲಗಳ ಪ್ರಕಾರ, ಸುರೇಶ್ ರೈನಾ ಅವರಿಗೆ ಸಿಎಸ್‍ಕೆ ನೀಡಿರುವ ಹೊಟೇಲ್ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೊಂದಿರುವ ಕಾರಣ ಅವರು ಐಪಿಎಲ್ ನಿಂದ ಹೊರನಡೆದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
ಅದೇನೇ ಇರಲಿ, ಸುರೇಶ್ ರೈನಾ ಅವರಿಗೆ ಜಮ್ಮು ಕಾಶ್ಮೀರದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ಜಮ್ಮು ಕಾಶ್ಮೀರ ಕ್ರಿಕೆಟ್ ಬಗ್ಗೆಯೂ ಮಾತನಾಡಿದ್ದಾರೆ. ಅದೇ ರೀತಿ ಮೂರು ಬಾರಿ ಎಒಸಿಗೂ ಭೇಟಿ ಕೊಟ್ಟಿದ್ದಾರೆ. ಧೋನಿ ಜೊತೆಯಾಗಿ ಎಲ್‍ಓಸಿಗೆ ಭೇಟಿ ನೀಡಿರುವ ವಿಚಾರ ಅವರ ಮನೆಯವರಿಗೆ ಗೊತ್ತಿಲ್ಲ. ಅಲ್ಲಿ ಅವರ ಕಮಾಂಡೋ ಅಧಿಕಾರಿಗಳಾಗಿರುವ ಸ್ನೇಹಿತರನ್ನು ಭೇಟಿ ಮಾಡಿದ್ದಾರೆ. ಒಟ್ಟಿನಲ್ಲಿ ಕಷ್ಟದ ದಿನಗಳಲ್ಲಿ ಜೀವನ ಸಾಗಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಸ್ಟಾರ್ ಕ್ರಿಕೆಟಿನಾಗಿ ರೂಪುಗೊಂಡಿರುವ ಸೋನು ಸಾಧನೆಗೆ ಸಲಾಂ ಅನ್ನಲೇಬೇಕು. ಹಾಗೇ ಸುರೇಶ್ ರೈನಾ ಅವರ ಕ್ರಿಕೆಟ್ ಬದುಕನ್ನು ಸುಂದರವಾಗಿ ರೂಪಿಸಿರುವ ತ್ರಿಲೋಕ್ ಚಂದ್ ರೈನಾ ಅವರ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ.








