ಲಾಕ್ ಡೌನ್ ವಿಸ್ತರಣೆ ವಿರೋಧಿಸಿ ಮುಂಬೈ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಲು ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಲಾಕ್ ಡೌನ್ ವಿಸ್ತರಣೆ ವಿರೋಧಿಸಿ, ಮಂಗಳವಾರ ಮಧ್ಯಾಹ್ನ ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದ 1,000 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದ್ದು, ಮನವೊಲಿಕೆ ಯತ್ನ ಕೈಗೂಡದ ಹಿನ್ನೆಲೆಯಲ್ಲಿ ಲಘು ಲಾಠಿ ಪ್ರಹಾರ ನಡೆಸಿದರು.
ಮುಂಬೈನ ಬಾಂದ್ರಾ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ 1,000 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ತಮ್ಮ ಸ್ಥಳೀಯ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಹಿಂತಿರುಗಲು ಸಾರಿಗೆ ವ್ಯವಸ್ಥೆಗಳನ್ನು ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಕಾರ್ಮಿಕರು ಪ್ರತಿಭಟನೆ ನಡೆಸಲು ನವಿ ಮುಂಬೈ ಮೂಲದ ವಿನಯ್ ದುಬೆ ಹಾಕಿದ ಪ್ರಚೋದನಕಾರಿ ಫೇಸ್ ಬುಕ್ ಸ್ಟೇಟಸ್ ಮತ್ತು ಟ್ವೀಟ್ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರ ವಲಸೆ ಕಾರ್ಮಿಕರಿಗೆ ಊರಿಗೆ ಹೋಗಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದ ವಿನಯ್ ದುಬೆ ಏಪ್ರಿಲ್ 18ರೊಳಗೆ ರೈಲುಗಳ ವ್ಯವಸ್ಥೆ ಮಾಡದಿದ್ದರೆ ವಲಸೆ ಕಾರ್ಮಿಕರು ದೇಶವ್ಯಾಪಿ ಪ್ರತಿಭಟನೆ ಆರಂಭಿಸಬೇಕು ಎಂದು ಟ್ವೀಟ್ ಮಾಡಿದ್ದ. ಇದೀಗ ಲಾಕ್ ಡೌನ್ ವಿಸ್ತರಣೆ ವಿರೋಧಿಸಿ ಪ್ರತಿಭಟನೆ ನಡೆಸಲು ಪ್ರಚೋದನೆ ನೀಡಿದ ಆರೋಪದ ಮೇಲೆ ವಿನಯ್ ದುಬೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾರತದ ಪೈಕಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ 2,455 ಜನರಲ್ಲಿ ಕೊವಿಡ್-19 ಸೋಂಕು ಕಾಣಿಸಿಕೊಂಡಿದ್ದು, 160 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯೊಂದಿಗೆ ಫೋನ್‌ನಲ್ಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂತಹ ಘಟನೆಗಳು ಕೊರೊನಾ ವೈರಸ್ ವಿರುದ್ಧದ ದೇಶದ ಹೋರಾಟವನ್ನು ದುರ್ಬಲಗೊಳಿಸಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿರುವ ವಲಸೆ ಕಾರ್ಮಿಕರಿಗೆ ಧೈರ್ಯ ತುಂಬಿರುವ ಸಿಎಂ ಉದ್ಧವ್ ಠಾಕ್ರೆ, ‘ಲಾಕ್‌ಡೌನ್ ಎನ್ನುವುದು ಲಾಕಪ್ ಅಲ್ಲ, ಇದು ನಮ್ಮ ದೇಶ. ನೀವು ಇಲ್ಲಿ ಸುರಕ್ಷಿತವಾಗಿದ್ದೀರಿ, ಯೋಚನೆ ಮಾಡಬೇಡಿ. ಲಾಕ್‌ಡೌನ್ ಕೊನೆಗೊಂಡ ಬಳಿಕ, ನಾನು ಮಾತ್ರವಲ್ಲ, ಕೇಂದ್ರ ಸರ್ಕಾರವೂ ನಿಮಗೆ ವ್ಯವಸ್ಥೆ ಮಾಡಿಕೊಡಲಿದೆ. ನಿಮ್ಮ ಇಚ್ಛೆಗೆ ವಿರೋಧವಾಗಿ ನೀವು ಇಲ್ಲೇ ಉಳಿಯಬೇಕು ಎಂದು ಯಾರೂ ಬಯಸುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...








