ಚಿರತೆ ಅಂಗಾಂಗವನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ
ಮೈಸೂರು: ಚಿರತೆ ಅಂಗಾಂಗಗಳನ್ನು ಮಾರಾಟ ಮಾಡಲು ಯತ್ನಿಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿರತೆ ಸಾಯಿಸಿ ಅದರ ಚರ್ಮ ಹಾಗೂ ಅಂಗಾಂಗವನ್ನು ಮಾರಾಟ ಮಾಡುತ್ತಿದ್ದರು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಚಿರತೆ ಚರ್ಮ, ನಾಲ್ಕು ಕಾಲಿನ ಭಾಗಗಳು, ಕೃತ್ಯಕ್ಕೆ ಬಳಸಿದ್ದ ಒಂದು ಒಂಟಿ ನಳಿಕೆ ಬಂದೂಕು, ಒಂದು ಬೈಕ್ ಅನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹನಗೋಡಿನ ಸಮೀಪದ ಅಬ್ಬೂರಿನ ಓರ್ವ, ವಿವಿಧ ಹಾಡಿಗಳ ನಾಲ್ವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನು ಕೆಲವರು ನಾಪತ್ತೆಯಾಗಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವನ್ಯಜೀವಿ ವಲಯದಲ್ಲಿ ಚಿರತೆ ಹತ್ಯೆ ಮಾಡಿ ಚರ್ಮ, ನಾಲ್ಕು ಕಾಲಿನ ಭಾಗವನ್ನು ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಹನಗೋಡು ಪಂಚವಳ್ಳಿ ಮುಖ್ಯರಸ್ತೆಯ ಕಡೇಮನುಗನಹಳ್ಳಿ ಕ್ರಾಸ್ ಬಳಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.