ಪ್ರತಿಷ್ಟಿತ ಕಂಪೆನಿಯ ಸ್ಟಿಕ್ಕರ್ ಅಂಟಿಸಿ ದುಬಾರಿ ಬೆಲೆಗೆ ಟಿವಿ ಮಾರುತ್ತಿದ್ದ ವಂಚಕನ ಬಂಧನ
ಬೆಂಗಳೂರು, ಜುಲೈ 7: ಬೆಂಗಳೂರಿನಲ್ಲಿ ಸ್ಥಳೀಯವಾಗಿ ಸಿದ್ಧಪಡಿಸಿದ್ದ ಟಿವಿಗಳಿಗೆ ಸೋನಿ ಕಂಪೆನಿಯ ಸ್ಟಿಕ್ಕರ್ ಅಂಟಿಸಿ ಸಾರ್ವಜನಿಕರಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆಯ ಸುರೇಶ್ (45) ಎಂಬಾತ ಸ್ಥಳೀಯವಾಗಿ ಸಿದ್ಧಪಡಿಸಿದ್ದ ಟಿವಿಗಳಿಗೆ ಪ್ರತಿಷ್ಠಿತ ಸೋನಿ ಕಂಪೆನಿಯ ಸ್ಟಿಕ್ಕರ್ ಅಂಟಿಸಿ ಬಳಿಕ ದುಬಾರಿ ಬೆಲೆಗೆ ಅದನ್ನು ಮಾರಾಟ ಮಾಡಿ ಜನರನ್ನು ವಂಚಿಸುತ್ತಿದ್ದ. ಸಿಸಿಬಿ ಪೊಲೀಸರು ಆತನನ್ನು ಇದೀಗ ಬಂಧಿಸಿದ್ದು, ಆರೋಪಿಯಿಂದ 32 ಇಂಚಿನ 4 ಸ್ಮಾರ್ಟ್ ಟಿವಿ, 2 ಸಾಮಾನ್ಯ ಟಿವಿ, 42 ಇಂಚಿನ 5 ಸ್ಮಾರ್ಟ್ ಟಿವಿ, 42 ಇಂಚಿನ 1 ಹಾಗೂ 55 ಇಂಚಿನ 3 ಸ್ಮಾರ್ಟ್ ಟಿವಿ ಸೇರಿದಂತೆ ಒಟ್ಟು 15 ಟಿವಿ ಹಾಗೂ 75 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.








