ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆಗಳನ್ನು ಕೂಗಿದ್ದ ಕಾಶ್ಮೀರದ ವಿದ್ಯಾರ್ಥಿಗಳನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ದೇಶದ್ರೋಹದ ಆರೋಪ ಸಂಬಂಧ ಗೋಕುಲ್ ರೋಡ್ ಪೊಲೀಸರು ಇಂದು ಹುಬ್ಬಳ್ಳಿಯ 3ನೇ ಜೆಎಂಎಫ್ ಸಿ ನ್ಯಾಯಾಲಯ ಮುಂದೆ ಆರೋಪಿಗಳನ್ನು ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪಾ ಅವರು ಆರೋಪಿಗಳಿಗೆ ಮಾರ್ಚ್ 2ರವರೆಗೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಆರೋಪಿಗಳ ಮೇಲೆ ಹಲ್ಲೆ
ಆರೋಪಿಗಳನ್ನು ಕೋರ್ಟ್ ನಿಂದ ಹೊರಗಡೆ ಕರೆದುಕೊಂಡು ಬರುವಾಗ ಅಲ್ಲಿ ಸೇರಿದ್ದ ಸಾರ್ವಜನಿಕರು ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಸಾರ್ವಜನಿಕರನ್ನು ತಡೆದು ಆರೋಪಿಗಳನ್ನು ಪೊಲೀಸ್ ವ್ಯಾನ್ ಗೆ ಹತ್ತಿಸಿದರು. ಕೆಲವರು ತಮ್ಮ ಚಪ್ಪಲಿ ಮತ್ತು ಶೂಗಳನ್ನು ಆರೋಪಿಗಳ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಕೆಎಲ್‌ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಶ್ಮೀರದ ಶೋಫಿಯಾನ ಜಿಲ್ಲೆಯ ಆಮಿರ್ ಮೊಹಿದ್ದೀನ್ ವಾನಿ, ಬಾಸೀತ್ ಆಸೀಫ್ ಸೋಫಿ, ತಾಲಿಬ ಮಾಜಿದ್ ಎನ್ನುವವರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಪಾಕ್ ಪರ ಘೋಷಣೆ ಕೂಗಿದ್ದರು.








