ನವದೆಹಲಿ: ಇಂದು ಬಿಜೆಪಿಯ ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿದ್ದ ಕೇಂದ್ರದ ಮಾಜಿ ವಿತ್ತ ಸಚಿವರಾದ ಅರುಣ್ ಜೇಟ್ಲಿ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ. ಅರುಣ್ ಜೇಟ್ಲಿ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಇಂದು ಅವರ ಪುಣ್ಯಸ್ಮರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಇಂದು ಜೇಟ್ಲಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಅಲ್ಲದೇ ಜೇಟ್ಲಿಯವರ ಪುಣ್ಯಸ್ಮರಣೆ ಅಂಗವಾಗಿ ದೇಶದ ಹಲವೆಡೆ ಇಂದು ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್‌ಗಳ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಮೋದಿ ಅವರು “ಕಳೆದ ವರ್ಷ ಇದೇ ದಿನ ನಾವು ಅರುಣ್ ಜೇಟ್ಲಿಯವರನ್ನು ಕಳೆದುಕೊಂಡೆವು. ನಾನು ಇಂದು ನನ್ನ ಸ್ನೇಹಿತರಾದ ಜೇಟ್ಲಿಯವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರ ಸಮಾಜ ಸೇವೆ, ಬುದ್ಧಿಶಕ್ತಿ, ವ್ಯಕ್ತಿತ್ವವೂ ಸದಾ ಅಚ್ಚಳಿಯದೇ ನೆನಪಿನಲ್ಲೇ ಉಳಿಯುವಂತದ್ದು” ಎಂದು ಅರುಣ್ ಜೇಟ್ಲಿ ಅವರ ದೇಶ ಸೇವೆಯನ್ನು ನೆನೆದಿದ್ದಾರೆ. 
ಇನ್ನೂ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಸಹ ಈ ಕುರಿತಾಗಿ ಟ್ವೀಟ್ ಮಾಡಿದ್ದು, “ಅರುಣ್ ಜೇಟ್ಲಿ ಅವರು ಓರ್ವ ಅತ್ಯುತ್ತಮ ರಾಜಕಾರಣಿ. ಭಾರತದ ರಾಜಕೀಯ ಇತಿಹಾಸದಲ್ಲೇ ನೆನಪು ಮಾಡಿಕೊಳ್ಳಬೇಕಾದ ಉತ್ತಮ ವಾಗ್ಮಿ ಅವರು. ಅವರಿಗೆ ದೇಶದ ಮೇಲೆ ಇದ್ದ ಪ್ರೀತಿ ಮಾತಿನಲ್ಲಿ ಹೇಳಲಾಗದು ಮತ್ತು ಸಮಾಜಕ್ಕೆ ಅವರ ಕೊಡುಗೆ ಅಪಾರ” ಎಂದು ಶ್ರದ್ದಾಂಜಲಿ ಸಲ್ಲಿಸಿದ್ದಾರೆ.










