ಕಾಶಿಯಿಂದ ದೆಹಲಿಯತ್ತ ಬೆಲ್ಲದ್ : ಕುತೂಹಲ ಕೆರಳಿಸಿದ ಬೆಳವಣಿಗೆ
ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತವಾಗಿದ್ದು, ಜುಲೈ 26ಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡೋದು ಬಹುತೇಕ ಖಚಿತವಾಗಿದೆ. ಈ ಮಧ್ಯೆ ಸಿಎಂ ರೇಸ್ ನಲ್ಲಿರುವ ಶಾಸಕ ಅರವಿಂದ್ ಬೆಲ್ಲದ್, ಕಾಶಿಯಿಂದ ದೆಹಲಿಯತ್ತ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ವಾರಣಾಸಿಗೆ ತೆರಳಿದ್ದ ಸಿಎಂ ಸ್ಥಾನದ ಆಕಾಂಕ್ಷಿ ಶಾಸಕ ಅರವಿಂದ ಬೆಲ್ಲದ್ ಕಾಶಿ ವಿಶ್ವನಾಥನ ದರ್ಶನ ಮಾಡಿ ಜಂಗಮವಾಡಿ ಮಠದಲ್ಲಿರುವ ಪಂಚಪೀಠಗಳಲ್ಲಿ ಒಂದಾದ ಕಾಶಿಪೀಠದ ಜಗ್ಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದರು.
ಇದೀಗ ಅವರು ಬೆಂಗಳೂರಿಗೆ ಮರಳದೇ ನವದೆಹಲಿಗೆ ತೆರಳಿದ್ದು, ಅಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿ.ಟಿ.ರವಿ ಅವರನ್ನು ಭೇಟಿಯಾಗಿರುವ ಬೆಲ್ಲದ್, ಇವತ್ತು ಬಿ.ಎಸ್.ಸಂತೋಷ್ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ.
ಸಿಎಂ ಬದಲಾವಣೆ ಚರ್ಚೆ ಮುನ್ನಲೆಗೆ ಬಂದಾಗಲೆಲ್ಲಾ ಶಾಸಕ ಅರವಿಂದ್ ಬೆಲ್ಲದ್ ಹೆಸರು ಮುನ್ನಲೆಗೆ ಬರುತ್ತದೆ. ಹೀಗಾಗಿ ಬೆಲ್ಲದ್ ಈಗ ದೆಹಲಿಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ.