ಆರ್ಯ ಸಮಾಜ ನಾಯಕ ಸ್ವಾಮಿ ಅಗ್ನಿವೇಶ್ ನಿಧನ
ಹರಿಯಾಣ, ಸೆಪ್ಟೆಂಬರ್11: ಹರಿಯಾಣ ಮಾಜಿ ಶಾಸಕ ಮತ್ತು ಆರ್ಯ ಸಮಾಜ ನಾಯಕ ಸ್ವಾಮಿ ಅಗ್ನಿವೇಶ್ ನವದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಯಕೃತ್ತಿನ ಸಿರೋಸಿಸ್ ಕಾರಣ ನವದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್‌ನಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರದಿಂದ ಅವರು ವೆಂಟಿಲೇಟರ್‌ನಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ.
1970 ರಲ್ಲಿ ಆರ್ಯ ಸಮಾಜದ ತತ್ವಗಳನ್ನು ಆಧರಿಸಿ ಅಗ್ನಿವೇಶ್ ಅವರು ಆರ್ಯ ಸಭಾ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು.
ಸ್ತ್ರೀ ಭ್ರೂಣ ಹತ್ಯೆ ಮತ್ತು ಮಹಿಳೆಯರ ವಿಮೋಚನೆ ವಿರುದ್ಧದ ಅಭಿಯಾನಗಳು ಸೇರಿದಂತೆ ಸಾಮಾಜಿಕ ಕ್ರಿಯಾಶೀಲತೆಯ ವಿವಿಧ ಕ್ಷೇತ್ರಗಳಲ್ಲಿ ಅವರು ಭಾಗಿಯಾಗಿದ್ದರು. ಹಿಂದೂ ವಿರೋಧಿ ಧೋರಣೆ ಮತ್ತು ನಕ್ಸಲ್ ಸಂಪರ್ಕದಿಂದಾಗಿ ಸುದ್ದಿಯಲ್ಲಿದ್ದ ಇವರು ವಿವಾದದಿಂದಲೇ ದೇಶದ ಜನರ ಗಮನಸೆಳೆದವರು. 1939ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶ ಶ್ರೀಕಾಕುಲಂನಲ್ಲಿ ಜನಿಸಿದರು. ಅವರ ಬಾಲ್ಯದ ಹೆಸರು ವೇಪ ಶ್ಯಾಮರಾವ್ . ನಾಲ್ಕು ವರ್ಷ ಪ್ರಾಯವಿದ್ದಾಗ ಅವರು ತಂದೆಯನ್ನು ಕಳೆದುಕೊಂಡರು ಮತ್ತು ಛತ್ತೀಸ್ಗಢದಲ್ಲಿರುವ ತಾತನ ಮನೆಯಲ್ಲಿ ಬೆಳೆದರು. ಕಾನೂನು ಮತ್ತು ವಾಣಿಜ್ಯ ವಿಷಯದಲ್ಲಿ ಪದವಿ ಪಡೆದ ಅವರು ಕೋಲ್ಕತದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.
ವಕೀಲ ಪ್ರಶಾಂತ್ ಭೂಷಣ್ ಅವರು ಸ್ವಾಮಿ ಅಗ್ನಿವೇಶ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ನನಗೆ ತಿಳಿದಿರುವ ಧೈರ್ಯಶಾಲಿಗಳ ಪೈಕಿ ಸ್ವಾಮಿ ಅಗ್ನಿವೇಶ್ ಕೂಡ ಒಬ್ಬರು. ಸಾರ್ವಜನಿಕ ಒಳಿತಿಗಾಗಿ ಎಂತಹ ಅಪಾಯಗಳನ್ನು ಎದುರಿಸಲು ಸಿದ್ಧರಿದ್ದರು. ಸ್ವಾಮಿ ಅಗ್ನಿವೇಶ್ ಅವರ ನಿಧನವು ಒಂದು ದೊಡ್ಡ ದುರಂತ ಎಂದಿದ್ದಾರೆ.