ರಾಜ್ಯದಲ್ಲಿ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಕೂಡಲೇ ಶಾಲೆ ಪುನರಾರಂಭ – ಸುರೇಶ್ ಕುಮಾರ್
ಬೆಂಗಳೂರು, ಸೆಪ್ಟೆಂಬರ್05: ಕೊರೋನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ಇನ್ನೂ ಶಾಲೆ – ಕಾಲೇಜುಗಳು ಪುನರಾರಂಭವಾಗಿಲ್ಲ. ಮಕ್ಕಳ ಕಲಿಕೆ ಆನ್ಲೈನ್ ನಲ್ಲಿ ಮುಂದುವರಿದಿದ್ದು, ಕಾಲೇಜುಗಳು ಒಕ್ಟೋಬರ್ ನಿಂದ ಪುನರಾರಂಭವಾಗಲಿದೆ ಎಂದು ಈಗಾಗಲೇ ಉನ್ನತ ಶಿಕ್ಷಣ ಸಚಿವರು ತಿಳಿಸಿದ್ದಾರೆ. ಇದೀಗ ಶಾಲೆಗಳನ್ನು ಎಂದು ತೆರೆಯಲಾಗುವುದು ಎಂಬ ಪ್ರಶ್ನೆ ಉದ್ಭವಿಸಿದೆ.
ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ ಕೂಡಲೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ
ಶಿಕ್ಷಣ ಇಲಾಖೆ ಪ್ರತಿ ಶನಿವಾರವೂ ಸೇರಿದಂತೆ 160 ದಿನಗಳು ಸಿಕ್ಕಿದರೆ ವಿದ್ಯಾರ್ಥಿಗಳಿಗೆ ಪಾಠ ಕಲಿಸಬಹುದು ಎಂದು ಸಲಹೆ ನೀಡಿದೆ. ಈ ಮೊದಲು 220 ದಿನ ಶಾಲಾ ತರಗತಿ ನಡೆಸಲಾಗುತ್ತಿತ್ತು. ಮುಂದೆ ಇನ್ನೆಷ್ಟು ದಿನಗಳು ಸಿಗಲಿದೆ ಎಂಬುದನ್ನು ಕಾದು ನೋಡಲಾಗುತ್ತಿದೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ವಾರದೊಳಗೆ ಚಾಲನೆ ನೀಡಲಾಗುವುದು ಎಂದು ಸುರೇಶ್ ಕುಮಾರ್ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಮಕ್ಕಳಿಗೆ ಕೊಲಂಬಸ್, ವಾಸ್ಕೋಡಿಗಾಮಾ ಬಗ್ಗೆ ತಿಳಿಸಲಾಗುತ್ತಿದ್ದು, ಈ ಮೂಲಕ ಸ್ಥಳೀಯ ಮಹತ್ವಗಳನ್ನು ಮರೆಯುತ್ತಿದ್ದೇವೆ. ಹೀಗಾಗಿ ರಾಜ್ಯ ವ್ಯಾಪ್ತಿಯಲ್ಲಿ ಆಯಾ ತಾಲೂಕಿನ ಮಹಾನ್ ವ್ಯಕ್ತಿ, ಪ್ರಸಿದ್ಧ ಜಾಗಗಳನ್ನು ಪರಿಚಯಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.








